ಹೈದರಾಬಾದ್: ಹೋಟೆಲ್‌ನಲ್ಲಿ ಅಗ್ನಿ ದುರಂತ, 7 ಮಂದಿ ಸಜೀವ ದಹನ
ಹೈದರಾಬಾದ್, ಸೆ. 13: ಇಲ್ಲಿನ ಸಿಕಂದರಾಬಾದ್ ಬಳಿಯ ಹೋಟೆಲ್ ಲಾಡ್ಜ್ ವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಇ -ಬೈಕ್ ಶೋರೂಮ್‌ನಲ್ಲಿ ಕಾಣಿಸಿಕೊಂಡ ಬೆಂಕಿ ವ್ಯಾಪ್ತಿಸಿ ಹೋಟೆಲ್ ತನಕ ಹಬ್ಬಿದ್ದು, ಏಳು ಮಂದಿಯನ್ನು ಬಲಿ ಪಡೆದುಕೊಂಡಿದೆ. ಸೋಮವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದರೆ, 10 ಮಂದಿಗೆ ತೀವ್ರಗಾಯಗಳಾಗಿವೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿ. ವಿ ಆನಂದ್ ಹೇಳಿದ್ದಾರೆ.
''ಸಿಕಂದರಾಬಾದ್ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿರುವ ರೂಬಿ ಹೋಟೆಲ್ ಕಮ್ ಲಾಡ್ಜ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕು ಮಹಡಿಯ ಈ ಕಟ್ಟಡದ ಕೆಳ ಮಹಡಿಯಲ್ಲಿದ್ದ ಇ-ಬೈಕ್ ಶೋರೂಮ್ ನಲ್ಲಿದ್ದ ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಸ್ಪೋಟವೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ'' ಎಂದು ಪೊಲೀಸ್ ಆಯುಕ್ತ ಸಿ. ವಿ ಆನಂದ್ ತಿಳಿಸಿದರು.
ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಗಾಯಾಳುಗಳನ್ನು ಗಾಂಧಿ ಆಸ್ಪತ್ರೆ ಹಾಗೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ, ಹೊಗೆ ನಡುವೆ ಉಸಿರಾಟದ ತೊಂದರೆ ಅನುಭವಿಸಿ, ಉಸಿರುಗಟ್ಟಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಹೇಳಿದರು.

ಗಾಯಗೊಂಡವರ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಯಶೋದಾ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ, ಸ್ಥಳೀಯ ಪೊಲೀಸ್ ಅಧಿಕಾರಿ ಆಂಜನೇಯುಲು ಹಾಗೂ ಕೆಲ ಯುವಕರು ಪಕ್ಕದ ಕಟ್ಟಡ ಹತ್ತಿ ರೂಬಿ ಹೋಟೆಲ್ ನೊಳಗೆ ಹೊಕ್ಕಲು ಯತ್ನಿಸಿದ್ದಾರೆ. ಆದರೆ, ರಕ್ಷಣೆಗೆ ಧಾವಿಸುವಷ್ಟರಲ್ಲಿ ಹೋಟೆಲ್ ನಲ್ಲಿದ್ದವರು ಕಾರಿಡಾರ್ ನಲ್ಲಿ ಉಸಿರುಗಟ್ಟಿ ನೆಲಕ್ಕುರುಳಿ ಬಿದ್ದಿರುವ ದೃಶ್ಯ ಕಂಡು ಬಂದಿದೆ. ಈ ನಡುವೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ, ಕೆಲವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ 25 ಮಂದಿ ಅತಿಥಿಗಳು ಹೋಟೆಲ್ ಗೆ ಆಗಮಿಸಿದ್ದರು. ಅಗ್ನಿ ಶಾಮಕ ದಳ ಸಿಬ್ಬಂದಿ ಸುಮಾರು 9 ಮಂದಿಯನ್ನು ರಕ್ಷಿಸಿದ್ದಾರೆ.












Click it and Unblock the Notifications