ನಡುರಸ್ತೇಲಿ ಸ್ನೇಹಿತನನ್ನೇ ಕೊಚ್ಚಿ ಕೊಲ್ಲುವಾಗ ವಿಡಿಯೋ ಮಾಡಿದ ಜನರು!
ಹೈದರಾಬಾದ್, ನವೆಂಬರ್ 29: ಹೈದರಾಬಾದಿನ ಜನನಿಬಿಡ ರಸ್ತೆಯೊಂದರಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ತನ್ನ ಸ್ನೇಹಿತನನ್ನೇ ಮಚ್ಚಿನಿಂದ ಹಲ್ಲೆ ಮಾಡಿ ಕೊಂದ ಘಟನೆ ಬುಧವಾರ ರಾತ್ರಿ ನಡೆದಿದೆ.
ನಡು ರಸ್ತೆಯಲ್ಲಿ, ಕಟುಕರು ಉಪಯೋಗಿಸುವ ಮಚ್ಚಿನಿಂದ ಸ್ನೇಹಿತನ ಕತ್ತು ಕೊಯ್ದು ಆಟೋ ಡ್ರೈವರ್ ಕೊಲ್ಲುತ್ತಿದ್ದರೆ ರಸ್ತೆಯ ತುಂಬ ತುಂಬಿದ್ದ ಜನರು ವಿಡಿಯೋ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು!
ಚಾರ್ ಮಿನಾರ್ ನ ಬ್ಯುಸಿ ಮಾರ್ಕೆಟ್ ನಡುವೆ ಸಿನಿಮೀಯ ರೀತಿಯಲ್ಲಿ ನಡೆದ ಈ ಅಪರಾಧವನ್ನು ಇಬ್ಬರು ಪೊಲೀಸ್ ಪೇದೆಗಳೂ ನೋಡುತ್ತ ನಿಂತಿದ್ದರೂ, ಈ ದುರಂತವನ್ನು ತಪ್ಪಿಸುವ ಪ್ರಯತ್ನವನ್ನೂ ಮಾಡಿಲ್ಲ! ನೆರೆದಿದ್ದ ನೂರಾರು ಜನರಲ್ಲಿ ಒಬ್ಬರೂ ಆಟೋ ಡ್ರೈವರ್ ನನ್ನು ತಡೆಯುವ ಪ್ರಯತ್ನಕ್ಕೆ ಕೈಹಾಕದೆ, ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವಲ್ಲಿ ಉತ್ಸುಕತೆ ತೋರಿಸುತ್ತಿದ್ದರು!

ಆಟೋ ಡ್ರೈವರ್ ನನ್ನು 29 ವರ್ಷ ವಯಸ್ಸಿನ ಅಬ್ದುಲ್ ಖಾಜಾ ಎಂದು ಗುರುತಿಸಲಾಗಿದ್ದು, ಶಕೀರ್ ಖುರೇಶಿ ಎಂಬ ತನ್ನ ಸ್ನೇಹಿತನನ್ನೇ ಈತ ಕೊಂದಿದ್ದಾನೆ. ಸ್ನೇಹಿತ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗಲೂ ಆತನ ಪಕ್ಕದಲ್ಲೇ ಕೂತು ಆತನ ಕತ್ತಿಗೆ ಮತ್ತಷ್ಟು ಇರಿಯುತ್ತಿರುವ ದೃಶ್ಯ ವಿಕೃತಿಗೆ ಸಾಕ್ಷಿಯಾಗಿದೆ.
"ಈತ ನನ್ನ ತಾಯಿ ಮತ್ತು ಸಹೋದರಿಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಇವನನ್ನು ಕೊಂದು ನಾನು ಎಂಥ ಶಿಕ್ಷೆಯನ್ನು ಬೇಕಾದರೂ ಎದುರಿಸುವುದಕ್ಕೆ ಸಿದ್ಧ. ನನಗೆ ನನ್ನ ಕುಟುಂಬ ಮುಖ್ಯ" ಎಂದು ಖಾಜಾ ಕೂಗುತ್ತಿರುವ ದೃಶ್ಯವೂ ಸೆರೆಯಾಗಿದೆ.
ಘಟನೆ ನಡೆದ 10 ನಿಮಿಷದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಖಾಜಾ ತನ್ನ ಬಳಿ ಇದ್ದ ಆಟೋವನ್ನು ಖುರೇಶಿಗೆ ಬಾಡಿಗೆಗೆ ಎಂದು ನೀಡಿದ್ದ. ಆದರೆ ಖುರೇಶಿ ಅದನ್ನು ಅಕ್ರಮವಾಗಿ ಬೇರೆಯವರಿಗೆ ಮಾರಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಖಾಜಾನ ತಾಯಿ ಮತ್ತು ತಂಗಿಯ ಮೇಲೆ ಆತ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಇದರಿಂದಾಗಿ ಖುರೇಶಿ ಮತ್ತು ಖಾಜಾ ನಡುವೆ ವಗ್ವಾದವಾಗಿದ್ದು, ಇದೇ ವಿಕೋಪಕ್ಕೆ ತೆರಳಿ ಈ ಕೊಲೆ ನಡೆದಿದೆ ಎಂದು ವಿಚಾರಣೆಯ ಸಮಯದಲ್ಲಿ ಖಾಜಾ ಪೊಲೀಸರಿಗೆ ತಿಳಿಸಿದ್ದಾನೆ.












Click it and Unblock the Notifications