ಆಹಾರ ಹುಡುಕಿ ಬಂದು ವಿದ್ಯುತ್ ಕಂಬ ಏರಿದ ಚಿರತೆ ಅಲ್ಲೇ ಸಾವು
ಹೈದರಾಬಾದ್, ಜುಲೈ 4: ಇದು ತೆಲಂಗಾಣದಲ್ಲಿ ನಡೆದ ಘಟನೆ. ವಿದ್ಯುತ್ ಕಂಬ ಏರಿದ ಚಿರತೆ ವಿದ್ಯುತ್ ಸ್ಪರ್ಶದಿಂದ ಸೋಮವಾರ ಮೃತಪಟ್ಟಿದೆ. ನಿಜಾಂಬಾದ್ ಜಿಲ್ಲೆಯ ಮಲ್ಲರಾಮ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಜನರು ವಾಸಿಸುವ ಪ್ರದೇಶದೊಳಕ್ಕೆ ಚಿರತೆ ಬಂದಿದೆ. ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ. ಈ ಮಧ್ಯೆ ವಿದ್ಯುತ್ ಕಂಬ ಏರಿದ ಚಿರತೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ.

ಹೈ ಟೆನ್ಷನ್ ತಂತಿಯ ಮೇಲೆ ಚಿರತೆ ಕಳೇಬರ ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ವಿದ್ಯುತ್ ಪೂರೈಕೆ ನಿಲ್ಲಿಸಿ, ಕೆಳಕ್ಕೆ ಇಳಿಸಲಾಗಿದೆ. ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿದ್ದ ಚಿರತೆ ಕಳೇಬರವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.
ಆಹಾರ ಹುಡುಕಿಕೊಂಡು ಕಾಡಿನಿಂದ ಚಿರತೆ ಹೊರಬಂದಿದೆ. ಬಲಿ ಪ್ರಾಣಿಯನ್ನು ಬೇಟೆ ಆಡುವ ಉದ್ದೇಶದಿಂದಲೇ ವಿದ್ಯುತ್ ಕಂಬ ಏರಿರಬೇಕು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವನ್ಯಜೀವಿಯೊಂದು ಹೀಗೆ ವಿದ್ಯುತ್ ಸ್ಪರ್ಶಕ್ಕೆ ತುತ್ತಾಗಿ ಮೃತಪಟ್ಟಿರುವುದು ಬೇಸರದ ಸಂಗತಿ. ಅದರಲ್ಲೂ ಕಾಡಿನಲ್ಲಿ ಬೇಟೆ ಪ್ರಾಣಿಗಳು ಸಿಗದೆ ಜನ ವಸತಿ ಪ್ರದೇಶದಲ್ಲಿ ಬರುತ್ತಿರುವುದು ಆತಂಕದ ವಿಚಾರ.












Click it and Unblock the Notifications