ಸೈಕೋ ವ್ಯಕ್ತಿಯಿಂದ ತಾಯಿ, ಪತ್ನಿ, ಪುತ್ರಿ ಕಗ್ಗೊಲೆ
ಹೈದ್ರಾಬಾದ್, ಮೇ 15: ಮಾನಸಿಕ ಖಿನ್ನತೆಗೊಳಗಾಗಿ ಸೈಕೋನಂತೆ ಆಡುತ್ತಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮುಂಜಾನೆ ಕತ್ತಿಯಿಂದ ತನ್ನ ಕುಟುಂಬ ಸದಸ್ಯರನ್ನು ಕೊಚ್ಚಿ ಕೊಂದು, ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ನಗರದ ಹೊರವಲಯದ ಪಹಾಡಿ ಶರೀಫಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಸರಣಿ ಹತ್ಯೆ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಹೈದ್ರಾಬಾದ್ ಬಾಲಾಪುರದಲ್ಲಿ ರಾಮರೆಡ್ಡಿ ಎಂಬಾತ ತಾಯಿ, ಪತ್ನಿ, ಪುತ್ರಿಯನ್ನು ಕೊಂದು ಹಾಕಿದ್ದಾರೆ. ಮೃತರನ್ನು ತಾಯಿ ಸುಭದ್ರಾ (65), ಪತ್ನಿ ರಾಧಿಕಾ (40) ಮತ್ತು ಪುತ್ರಿ ಅಕ್ಷಯಾ (14) ಎಂದು ಗುರುತಿಸಲಾಗಿದೆ. ರಾಮರೆಡ್ಡಿಯ ಹಿರಿಯ ಮಗಳು ಅಪ್ಪನ ಆರ್ಭಟ ಕಂಡು ಬೆಚ್ಚಿ ಬಿದ್ದು ಬಾತ್ ರೂಮಿನಲ್ಲಿ ಬಚ್ಚಿಟ್ಟುಕೊಂಡು ಜೀವ ಉಳಿಸಿಕೊಂಡಿದ್ದಾಳೆ.
ಕಳೆದ ಒಂದು ತಿಂಗಳಿನಿಂದ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ.ಇವರ ಮನೆಯ ಮೊದಲ ಮಹಡಿಯಲ್ಲಿ ರಾಮರೆಡ್ಡಿ ಸಹೋದರ ವಾಸವಾಗಿದ್ದಾರೆ. ಇತ್ತೀಚೆಗೆ ಆಸ್ತಿ ವಿಚಾರವಾಗಿ ಸಹೋದರರು ಮತ್ತು ತಾಯಿ ಜತೆ ಜಗಳ ನಡೆಯುತ್ತಿದ್ದರಿಂದ ರಾಮರೆಡ್ಡಿ ಖಿನ್ನತೆಗೆ ಒಳಗಾಗಿದ್ದ. ನಿನ್ನೆ ರಾತ್ರಿ ಸಹ ತಾಯಿ-ಪತ್ನಿ ಜತೆ ರಾಮರೆಡ್ಡಿ ಜಗಳವಾಡಿದ್ದ. ನಂತರ ಎಲ್ಲರೂ ಊಟ ಮಾಡಿ ಮಲಗಿದ್ದರು.

ಶುಕ್ರವಾರ ಮುಂಜಾನೆ ರಾಮರೆಡ್ಡಿ ಅವರ ತಂದೆ ಮುಂಜಾನೆ ವಿಹಾರಕ್ಕಾಗಿ ಹೊರಕ್ಕೆ ಹೋದ ಸಮಯ ನೋಡಿಕೊಂಡು ಮನೆಯವರೆಲ್ಲರ ಮೇಲೆ ಕತ್ತಿ ಬೀಸಿ ಕರುಣೆ ಇಲ್ಲದೆ ಕತ್ತು ಕೊಯ್ದು, ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ಮನೆಯ ಬಳಿಯಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತ ಬಾವಿಗೆ ಹಾರಿದ್ದನ್ನು ಗಮನಿಸಿದ ನೆರೆಹೊರೆಯವರು ಗಮನಿಸಿ ಆತನನ್ನು ರಕ್ಷಿಸಿದ್ದಾರೆ.
ಪಹಾಡಿ ಶರೀಫಾ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಮರೆಡ್ಡಿಯನ್ನು ಬಂಧಿಸಿ, ಮೂರೂ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಘಟನೆ ನಡೆಯಬೇಕಿತ್ತು. ನಡೆದಿದೆ ಅಷ್ಟೇ ಎಂದು ಹೇಳಿರುವ ರಾಮರೆಡ್ಡಿ ಇನ್ನೂ ಕೊಲೆಗೆ ನಿಖರ ಕಾರಣ ಕೊಟ್ಟಿಲ್ಲ. ತನಿಖೆ ಮುಂದುವರೆದಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications