ಅಮೆರಿಕದಲ್ಲಿ ಅಪಘಾತದಿಂದ ಹೃದಯಾಘಾತಕ್ಕೊಳಗಾಗಿ ಹೈದರಾಬಾದ್ ಯುವಕ ಸಾವು
ಹೈದರಾಬಾದ್, ಜೂನ್ 25: ರಸ್ತೆ ಅಪಘಾತದಿಂದ ಆತಂಕಕ್ಕೊಳಗಾದ ಯುವಕನೊಬ್ಬ ಸ್ಥಳದಲ್ಲೇ ಹೃದಯಾಘಾತಕ್ಕೊಳಗಾಗಿ ಮೃತನಾದ ಘಟನೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬಳಿ ನಡೆದಿದೆ.
ತೆಲಂಗಾಣದ ಹೈದರಾಬಾದ್ ಮೂಲದ ಸಯ್ಯದ್ ವಾಸಿಮ್ ಅಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ತಮ್ಮ ಸ್ನೇಹಿತರೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋ ಬಳಿ ಕಾರಿನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಿಂದ ತೀವ್ರ ಆಘಾತಕ್ಕೊಳಗಾದ ಸಯ್ಯದ್ ವಾಸಿಮ್ ಅಲಿ ಅಲ್ಲೇ ಕುಸಿದುಬಿದ್ದರು. ಅಪಘಾತದಿಂದ ಹೆಚ್ಚು ಹಾನಿಯಾಗದೆ ಇದ್ದರೂ, ಆತಂಕಕ್ಕೊಳಗಾಗಿದ್ದ ಅವರು ಹೃದಯಾಘಾತಕ್ಕೊಳಗಾಘಿ ಅಸುನೀಗಿದರು.
ಹೈದರಾಬಾದಿನಲ್ಲಿರುವ ವಾಸಿಮ್ ಕುಟುಂಬ ಅವರ ಅಂತ್ಯ ಸಂಸ್ಕಾರಕ್ಕೆಂದು ಅಮೆರಿಕ್ಕೆ ತೆರಳಲಿದ್ದು, ಅದಕ್ಕೆ ಸಹಕಾರ ನೀಡಬೇಕೆಂದು ಸರ್ಕಾರದ ಬಳಿ ಮನವಿ ಮಾಡಿದೆ. ಹೈದರಅಬಾದಿಗೆ ದೇಹ ತಲುಪಲು ಹಲವು ದಿನಗಳು ಹಿಡಿಯುವ ಕಾರಣ, ಕುಟುಂಬಸ್ಥರೇ ಅಮೆರಿಕಕ್ಕೆ ತೆರಳಲು ಅನುವು ಮಾಡಿಕೊಡುವಂತೆ ಕೋರಲಾಗಿದೆ.

ಇತ್ತೀಚೆಗಷ್ಟೇ ಕರ್ನಾಟಕದ ಬೀದರ್ ಮೂಲದ ಮುಖೇಶ್ ದೇಶ್ ಮುಖ್, ಪತ್ನಿ ಮೋನಿಕಾ ದೇಶ್ ಮುಖ್ ಮತ್ತು ಎರಡು ವರ್ಷ ವಯಸ್ಸಿನ ಅವರ ಪುತ್ರಿ ಅಮೆರಿಕದಲ್ಲಿ ಅಪಘಾತಕ್ಕೊಳಗಾಘಿದ್ದರು. ಈ ಘಟನೆಯಲ್ಲಿ ಮುಖೇಶ್ ಮತ್ತು ಪುತ್ರಿ ಅಸುನೀಗಿದ್ದರು. ಗಂಭೀರವಾಗಿ ಗಾಯಗೊಂಡಿರುವ ಮೋನಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications