ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GHMC polls: ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ ಪವರ್ ಸ್ಟಾರ್

|
Google Oneindia Kannada News

ಹೈದರಾಬಾದ್, ನ 20: ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಗೆ ಸೋಲುಣಿಸಲು ಭಾರತೀಯ ಜನತಾ ಪಕ್ಷ(ಬಿಜೆಪಿ) ಎಲ್ಲಾ ರೀತಿಯಿಂದಲೂ ಯತ್ನಿಸುತ್ತಿದೆ. ಈ ನಡುವೆ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಪಕ್ಷ ಕೂಡಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ ಬಳಿಕ ಕದನ ಕುತೂಹಲಕಾರಿಯಾಗಿತ್ತು. ಆದರೆ, ಇಂದು ಮಹತ್ವ ಬೆಳವಣಿಗೆಯೊಂದರಲ್ಲಿ ಪವನ್ ಕಲ್ಯಾಣ್ ಅವರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.

150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 20 ಕೊನೆ ದಿನಾಂಕವಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.

2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರಿದ್ದಾರೆ. ಹೀಗಾಗಿ, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಡಲಿವೆ.

ಪವನ್ ಭೇಟಿ ಮಾಡಿದ ಕಿಶನ್ ರೆಡ್ಡಿ

ಪವನ್ ಭೇಟಿ ಮಾಡಿದ ಕಿಶನ್ ರೆಡ್ಡಿ

ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ ಲಕ್ಷ್ಮಣ್ ಅವರು ಇಂದು ಜನಸೇನಾ ನಾಯಕ ನಂದೆಲ್ಲಾ ಮನೋಹರ್ ಅವರ ಜೊತೆಗೂಡಿ ನಟ, ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮಾತುಕತೆ ನಂತರ ಮಾತನಾಡಿದ ಪವನ್, ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಯುವ ಕಾರ್ಯಕರ್ತರು ಸಜ್ಜಾಗಿದ್ದರು, ಅವರಿಗೆ ಈ ನಿರ್ಣಯದಿಂದ ಬೇಸರ ಉಂಟಾಗಲಿದೆ. ಆದರೆ, ಬಿಜೆಪಿ ಮತಗಳ ವಿಭಜನೆಯಾಗದಂತೆ ತಡೆಯಲು ಈ ರೀತಿ ಕ್ರಮ ಅಗತ್ಯವಾಗಿತ್ತು ಎಂದರು.

ತೆಲಂಗಾಣ ಜನಕ್ಕೆ ಬದಲಾವಣೆ ಬೇಕಿದೆ

ತೆಲಂಗಾಣ ಜನಕ್ಕೆ ಬದಲಾವಣೆ ಬೇಕಿದೆ

ತೆಲಂಗಾಣ ಜನಕ್ಕೆ ಬದಲಾವಣೆ ಬೇಕಿದೆ, ಆ ಬದಲಾವಣೆಯನ್ನು ತರಲು ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಮಾತ್ರ ಸಾಧ್ಯವಿದೆ. ಹೈದರಾಬಾದ್ ಹಾಗೂ ತೆಲಂಗಾಣ ಅಭಿವೃದ್ಧಿಗಾಗಿ ಜನ ಸೇನಾ ಇಂಥ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ, ಮುಂಬರುವ ದಿನಗಳಲ್ಲೂ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಯಿದೆ ಎಂದು ಪವನ್ ಕಲ್ಯಾಣ್ ಸುಳಿವು ನೀಡಿದರು.

ಸಿಕಂದರಾಬಾದ್ ಮೂಲದ ಸಂಸದ ಕಿಶನ್ ರೆಡ್ಡಿ ಅವರು ಪವನ್ ಅವರ ನಿರ್ಧಾರವನ್ನು ಸ್ವಾಗತಿಸಿ, ರಾಜ್ಯದ ಅಭಿವೃದ್ಧಿಗಾಗಿ ಒಟ್ಟಿಗೆ ಶ್ರಮಿಸುವ ಅಗತ್ಯವಿದೆ ಎಂದಿದ್ದಾರೆ. 2014ರಲ್ಲಿ ಎನ್ಡಿಎ ಮಿತ್ರಪಕ್ಷವಾಗಿದ್ದ ಟಿಡಿಪಿ ಪರ ಪ್ರಚಾರ ಮಾಡಿ ಗೆಲ್ಲಿಸಿದ್ದ ಪವನ್ ಅವರು 2018ರಲ್ಲಿ ಎಡಪಕ್ಷ, ಬಿಎಸ್ಪಿ ಪರ ವಾಲಿದ್ದರೂ, ಜನಸೇನಾ ಒಂದು ಸ್ಥಾನ ಮಾತ್ರ ಗಳಿಸಿತ್ತು.

ಸುಧಾಕರ್ ಸಹ ಉಸ್ತುವಾರಿ

ಸುಧಾಕರ್ ಸಹ ಉಸ್ತುವಾರಿ

ಬಿಜೆಪಿ ಕೇಂದ್ರ ನಾಯಕರ ವಿಶ್ವಾಸ ಗಳಿಸಿರುವ ಕರ್ನಾಟಕ ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಗ್ರೇಟರ್ ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆಗೆ ಡಾ.ಸುಧಾಕರ್ ಅವರನ್ನು ಸಹ ಉಸ್ತುವಾರಿಯನ್ನಾಗಿ ರಾಷ್ಟ್ರಾಧ್ಯಕ್ಷ ಜೆ.ಪಿ,ನಡ್ಡಾ ನೇಮಿಸಿದ್ದಾರೆ.ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಭಾರಿಯನ್ನಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ನೇಮಿಸಲಾಗಿದೆ.

ತೆಲಂಗಾಣ ವಿಧಾನಸಭೆಯ ಉಪ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿರುವ ಬಿಜೆಪಿ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಗುರಿ ಹೊಂದಿದೆ.

ಪ್ರತಿ ಅಭ್ಯರ್ಥಿ 5 ಲಕ್ಷ ರು ಖರ್ಚು ವೆಚ್ಚದ ಮಿತಿ

ಪ್ರತಿ ಅಭ್ಯರ್ಥಿ 5 ಲಕ್ಷ ರು ಖರ್ಚು ವೆಚ್ಚದ ಮಿತಿ

ಪ್ರತಿ ಅಭ್ಯರ್ಥಿಗೆ ಭದ್ರತಾ ಠೇವಣಿ 5 ಸಾವಿರ ರು ಎಂದು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಭದ್ರತಾ ಠೇವಣಿ 2,500 ರು ಮಾತ್ರ, ಎಲ್ಲವನ್ನು ಆನ್ ಲೈನ್ ನಲ್ಲಿ ಸ್ವೀಕರಿಸಲಾಗಿದೆ. ಪ್ರತಿ ಅಭ್ಯರ್ಥಿಗೆ ಚುನಾವಣಾ ಖರ್ಚು ವೆಚ್ಚದ ಮಿತಿ 5 ಲಕ್ಷ ರು ಎಂದು ನಿಗದಿಯಾಗಿದೆ.

48,000 ಮತಗಟ್ಟೆ ಸಿಬ್ಬಂದಿ, ಸುಮಾರು 30, 000 ಪೊಲೀಸ್ ಸಿಬ್ಬಂದಿ ಚುನಾವಣಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಚುನಾವಣಾ ಆಯುಕ್ತ ಪಾರ್ಥಸಾರಥಿ ಹೇಳಿದ್ದಾರೆ.

English summary
The Jana Sena party of Power Star Pawan Kalyan on Friday decided to pull out of the Greater Hyderabad Municipal Corporation (GHMC) elections and extend support to its ally Bharatiya Janata Party (BJP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X