ನಿರೋಶಾ ಭಾವಿ ಪತಿ ಜತೆ ಚಾಟ್ ಕಾಲ್ ಮಾಡುತ್ತಾ ನೇಣಿಗೆ ಶರಣು
ಹೈದರಾಬಾದ್, ಮಾರ್ಚ್ 16: ಸನ್ ಟಿವಿ ಜಾಲಕ್ಕೆ ಸೇರಿರುವ ಜೆಮಿನಿ ಮ್ಯೂಸಿಕ್ ಚಾನೆಲ್ ನಲ್ಲಿ ನಿರೂಪಕಿಯಾಗಿದ್ದ ನಿರೋಶಾ ಅವರು ಬುಧವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಓದಿರಬಹುದು. ನಿರೋಶಾ ಸಾವಿನ ಕುರಿತ ಇನ್ನಷ್ಟು ಮಾಹಿತಿ ಇದೀಗ ನಮ್ಮ ಒನ್ ಇಂಡಿಯಾ ತೆಲುಗು ಪ್ರತಿನಿಧಿಯಿಂದ ಸಿಕ್ಕಿದೆ. ಭಾವಿ ಪತಿಯೊಂದಿಗೆ ವಿಡಿಯೋ ಚಾಟ್ ಮಾಡುತ್ತಾ ನಿರೋಶಾ ಸಾವಿಗೆ ಶರಣಾಗಿರುವುದು ದೃಢಪಟ್ಟಿದೆ.
ಸಿಕಂದರಾಬಾದಿನ ಸಿಂಧಿ ಕಾಲೋನಿಯ ಮಹಿಳಾ ವಸತಿ ಗೃಹ (ಪಿಜಿ) ದಲ್ಲಿ ವಾಸವಿದ್ದ ನಿರೋಶಾ ವಿಡಿಯೋ ಜಾಕಿಯಾಗುವುದಕ್ಕೂ ಮುನ್ನ ಕೆಲ ಸಮಯ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಬುಧವಾರ ಮಧ್ಯರಾತ್ರಿ ನಂತರ ಕೆನಡಾದಲ್ಲಿರುವ ತನ್ನ ಭಾವಿ ಪತಿಯೊಡನೆ ನಿರೋಶಾ ವಿಡಿಯೋ ಚಾಟ್ ಆರಂಭಿಸಿದ್ದಾರೆ.[ಮ್ಯೂಸಿಕ್ ಚಾನೆಲ್ ನಿರೂಪಕಿ ನಿರೋಶಾ ಆತ್ಮಹತ್ಯೆ]
ಈ ವಿಡಿಯೋ ಚಾಟ್ ವೇಳೆ ಇಬ್ಬರಿಗೂ ಮನಸ್ತಾಪವಾಗಿದೆ. ಚಾಟ್ ಜಾರಿಯಲ್ಲಿರುವಾಗಲೇ ನಿರೋಶಾ ತನ್ನ ದುಪ್ಪಟ್ಟಾ ಬಳಸಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರೋಶಾ ಈ ಆತುರದ ನಿರ್ಧಾರವನ್ನು ತಡೆಯಲು ಆಗದಂಥ ಪರಿಸ್ಥಿತಿಯಲ್ಲಿದ್ದ ಗೆಳೆಯ ರಿತ್ವಿಕ್ ಅಸಹಾಯಕತೆಯಿಂದ ಪರಿತಪಿಸಿದ್ದಾರೆ. ಇನ್ನಷ್ಟು ಮಾಹಿತಿ ಮುಂದೆ ಓದಿ...

ಆತ್ಮಹತ್ಯೆ ಬಗ್ಗೆ ಸೂಚನೆ ಸಿಕ್ಕಾಗ ಅಲರ್ಟ್ ಆದ ರಿತ್ವಿಕ್
ಆತ್ಮಹತ್ಯೆ ಬಗ್ಗೆ ಸೂಚನೆ ಸಿಕ್ಕಾಗ ಅಲರ್ಟ್ ಆದ ರಿತ್ವಿಕ್, ತಕ್ಷಣವೇ ಜ್ಯೂಬಿಲಿ ಹಿಲ್ಸ್ ನಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ನೆರವು ಕೋರಿದ್ದಾರೆ.ಆದರೆ, ಜ್ಯೂಬಿಲಿ ಹಿಲ್ಸ್ ನಿಂದ ಸಿಕಂದರಾಬಾದಿನ ಸಿಂಧಿ ಕಾಲೋನಿಯ ಮಹಿಳಾ ವಸತಿ ಗೃಹ (ಪಿಜಿ) ದ ಕಡೆಗೆ ಅವರು ಬರುವಷ್ಟರಲ್ಲಿ ನಿರೋಶಾ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.

ವಿಡಿಯೋ ಚಾಟ್ ಗೂ ಮುನ್ನ ಪೋಷಕರಿಗೆ ಕರೆ
ಕೆನಡಾದಲ್ಲಿರುವ ಗೆಳೆಯ ರಿತ್ವಿಕ್ ಜೊತೆಗೆ ವಿಡಿಯೋ ಚಾಟ್ ಮಾಡುವುದಕ್ಕೂ ಮುನ್ನ ನಿರೋಶಾ ಅವರು ಪೋಷಕರಿಗೆ ಕರೆ ಮಾಡಿದ್ದರು. ಚಿತ್ತೂರು ಜಿಲ್ಲೆಯ ಸೋಮಲ ಮಂಡಲ್ ನಲ್ಲಿರುವ ಆಕೆ ಪೋಷಕರು ಕೂಡಾ ಗಾಬರಿಯಿಂದ ಸಿಕಂದರಾಬಾದಿಗೆ ಬರುವಷ್ಟರಲ್ಲಿ ಅನರ್ಥ ಸಂಭವಿಸಿಬಿಟ್ಟಿದೆ. ನಿರೋಶಾ ಸಂಬಂಧಿಕರು ಹಾಗೂ ಪೋಷಕರು ಯಾರ ಮೇಲೂ ಅನುಮಾನವಿಲ್ಲ ಎಂದಿದ್ದಾರೆ. ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ

ಮಾನಸಿಕ ಖಿನ್ನತೆ ಸೂಚನೆಯೇ ಇರಲಿಲ್ಲ
ಕಚೇರಿಯಲ್ಲಿ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಡಲ್ ಆಗಿದ್ದು ನಾವು ನೋಡಿಲ್ಲ. ಸದಾ ನಗುನಗುತ್ತಾ ಖುಷಿಯಾಗಿ ಇರುತ್ತಿದ್ದರು. ಸೆಲ್ಫಿ ತೆಗೆದುಕೊಳ್ಳುತ್ತಾ ಎಲ್ಲರೊಡನೆ ಬೆರೆಯುತ್ತಿದ್ದರು ಎಂದು ಜೆಮಿನಿ ಟಿವಿಯ ಸಹದ್ಯೋಗಿ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರಿಗೆ ಇನ್ನೂ ಸರಿಯಾದ ಸುಳಿವು ಸಿಕ್ಕಿಲ್ಲ
ನಿರೋಶಾ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಆಕೆಗೆ ಮದುವೆ ಸದ್ಯಕ್ಕೆ ಇಷ್ಟವಿರಲಿಲ್ಲ. ಭಾವಿ ಪತಿ ಜೊತೆಗೆ ಜಗಳವಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆಕೆ ಬಳಿ ಇದ್ದ ಸೆಲ್ ಫೋನ್, ಲ್ಯಾಪ್ ಟಾಪ್ ವಶಪಡಿಸಿಕೊಂಡಿದ್ದಾರೆ. ಪೋಷಕರು, ಸಹದ್ಯೋಗಿಗಳ ಹೇಳಿಕೆ ಪಡೆಯಲಾಗಿದೆ.