ಹಿರಿಯ ಬಿಜೆಪಿ ಮುಖಂಡ ಬಂಗಾರು ಲಕ್ಷ್ಮಣ್ ಇನ್ನಿಲ್ಲ

ಮೂಲತಃ ಆಂಧ್ರಪ್ರದೇಶದವರಾದ ಬಂಗಾರು ಲಕ್ಷ್ಮಣ್ (74) ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದು ಒಂದು ವಾರದ ಹಿಂದೆ ಅವರನ್ನು ಸಿಕಿಂದರಾಬಾದ್‌ನಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಂಗಾರು ಲಕ್ಷ್ಮಣ್ ಅವರು 2000ದಿಂದ 2001ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. 1999 ಮತ್ತು 2000ದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಭಾನುವಾರ ಆಂಧ್ರಪ್ರದೇಶದಲ್ಲಿ ಬಂಗಾರು ಲಕ್ಷ್ಮಣ್ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದ್ದು, ಬಿಜೆಪಿ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.
1939 ಮಾರ್ಚ್ 17ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದ್ದ ಬಂಗಾರು ಲಕ್ಷ್ಮಣ್, ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶಿಸಿದ್ದರು. ದಿ.ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಆಂತರಿಕ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿ ಸೆರೆವಾಸ ಸಹ ಅನುಭವಿಸಿದ್ದರು. ಮೃತ ಬಂಗಾರು ಲಕ್ಷ್ಮಣ್ ಅವರು ಪತ್ನಿ ಸುಶೀಲಾ, ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. [ಲಂಚ ಪಡೆಯುವಾಗ ಸಿಕ್ಕಿಬಿದ್ದ ಲಕ್ಷ್ಮಣ್]
ತೆಹಲ್ಕಾ ಕಾರ್ಯಚರಣೆ : ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿದಲ್ಲಿದ್ದ ಸಂದರ್ಭದಲ್ಲಿ ಸಚಿವರಾಗಿದ್ದ ಬಂಗಾರು ಲಕ್ಷ್ಮಣ್ ಲಂಚ ಸ್ವೀಕರಿಸುತ್ತಿದ್ದ ವೇಳೆ ತೆಹಲ್ಕಾ ಪತ್ರಿಕೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷಗಳ ಕಾಲ ಸೆರೆವಾಸವನ್ನು ಅನುಭವಿಸಿದ್ದರು.












Click it and Unblock the Notifications