ಕೋವಿಡ್ ಸೋಂಕಿತನ ಶವ ಸಾಗಣೆ; ಡಾಕ್ಟರ್ ಕಾರ್ಯಕ್ಕೆ ಸೆಲ್ಯೂಟ್!
ಹೈದರಾಬಾದ್, ಜುಲೈ 13 : ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕೋವಿಡ್ - 19 ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಇವೆ. ಆದರೆ, ಇಲ್ಲೊಬ್ಬರು ವೈದ್ಯರ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ವೈದ್ಯರೇ ತೆಗೆದುಕೊಂಡು ಹೋಗಿದ್ದಾರೆ.
ಡಾ. ಪೆಂಡಲಾಯ ಶ್ರೀನಿವಾಸ ಶ್ರೀರಾಮ್ ಟ್ರಾಕ್ಟರ್‌ನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ಸಾಗಣೆ ಮಾಡಿದ್ದಾರೆ. ಮಹಾನಗರ ಪಾಲಿಕೆಯ ಟ್ರಾಕ್ಟರ್ ಡ್ರೈವರ್ ಶವ ಸಾಗಣೆ ಮಾಡಲು ಒಪ್ಪದ ಹಿನ್ನಲೆಯಲ್ಲಿ ವೈದ್ಯರೇ ಟ್ರಾಕ್ಟರ್ ಚಲಾಯಿಸಿದ್ದಾರೆ.
ಪೆದ್ದಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಶ್ರೀನಿವಾಸ ಶ್ರೀರಾಮ್ ಅವರು ಜಿಲ್ಲಾ ಕೋವಿಡ್ ನಿಯಂತ್ರಣ ಅಧಿಕಾರಿಯಾಗಿದ್ದಾರೆ. ಭಾನುವಾರ ಕರ್ತವ್ಯದಲ್ಲಿದ್ದ ಅವರು ಕೋವಿಡ್‌ನಿಂದ ಮೃತಪಟ್ಟ 45 ವರ್ಷದ ವ್ಯಕ್ತಿಯ ಶವವನ್ನು ಟ್ರಾಕ್ಟರ್‌ನಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಜನರ ಮೆಚ್ಚುಗೆ ಪಡೆದಿದ್ದಾರೆ.

ಕುಟುಂಬದವರು ದುಖಃದಲ್ಲಿದ್ದಾಗ ಪೆದ್ದಪಲ್ಲಿ ಸ್ಥಳೀಯ ಸಂಸ್ಥೆಗೆ ಶವವನ್ನು ತೆಗೆದುಕೊಂಡು ಹೋಗಲು ತಿಳಿಸಲಾಯಿತು. ಅವರು ಟ್ರಾಕ್ಟರ್ ವ್ಯವಸ್ಥೆ ಮಾಡಿದರು. ಆದರೆ, ಚಾಲಕ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ. ಬೇರೆ ಯಾರಿಗೂ ಟ್ರಾಕ್ಟರ್ ಓಡಿಸಲು ಬರುತ್ತಿರಲಿಲ್ಲ.
ಆಗ ವೈದ್ಯರು ಟ್ರಾಕ್ಟರ್ ಹತ್ತಿ ಶವವನ್ನು ತೆಗೆದುಕೊಂಡು ಹೊರಟರು. ಕುಟುಂಬ ಸದಸ್ಯರು ಅವರ ಜೊತೆ ಸ್ಮಶಾನಕ್ಕೆ ತೆರಳಿದರು. ಡಾಕ್ಟರ್ ಸಹಾಯದಿಂದಾಗಿ ಕುಟುಂಬದವರು ಸಂಪ್ರದಾಯದಂತೆ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ಸಹಾಯವಾಯಿತು.
ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯ ಶ್ರೀನಿವಾಸ್ ಶ್ರೀರಾಮ್, "ಕೊರೊನಾ ವೈರಸ್ ಸೋಂಕು ಹರಡುವ ಬಗ್ಗೆ ಹಲವು ತಪ್ಪು ಕಲ್ಪನೆಗಳು ಇವೆ. ಟ್ರಾಕ್ಟರ್ ಡ್ರೈವರ್ ಇದೇ ಆತಂಕದಲ್ಲಿ ಶವ ತೆಗದುಕೊಂಡು ಹೋಗಲು ನಿರಾಕರಿಸಿದ. ಅವರ ಆತಂಕ ಕಡಿಮೆ ಮಾಡಲು ಟ್ರಾಕ್ಟರ್ ಚಲಾಯಿಸಿದೆ" ಎಂದು ಹೇಳಿದ್ದಾರೆ.












Click it and Unblock the Notifications