ಹೈದರಾಬಾದ್: ಮುಸ್ಲಿಮ್ ಯುವತಿ ಮದುವೆಯಾದ ದಲಿತನ ಹತ್ಯೆ
ಹೈದರಾಬಾದ್, ಮೇ 5: ಇಲ್ಲಿಯ ಸರೂರ್ ನಗರ್ ಪ್ರದೇಶದಲ್ಲಿ 26 ವರ್ಷದ ದಲಿತ ಯುವಕನನ್ನ ಭೀಕರವಾಗಿ ಕೊಲೆ ಹತ್ಯೆ ಮಾಡಲಾಗಿದೆ. ಇದು ಮರ್ಯಾದಾ ಹತ್ಯೆ ಪ್ರಕರಣವಾಗಿದ್ದು, ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದಕ್ಕೆ ಈ ಯುವಕ ಇಹಲೋಕ ತ್ಯಜಿಸುವಂತಾಗಿದೆ. ಬುಧವಾರ ರಾತ್ರಿ 9ಗಂಟೆಗೆ ಹತ್ಯೆ ಘಟನೆ ನಡೆದಿರುವುದು ತಿಳಿದುಬಂದಿದೆ. ಕೊಲೆಯಾದ ದಲಿತ ಯುವಕ ಹೆಸರು ಬಿಲ್ಲಿಪುರಂ ನಾಗರಾಜು ಎನ್ನಲಾಗಿದೆ.
ಸರೂರ್ ನಗರ್‌ನಲ್ಲಿ ನವವಿವಾಹಿತ ದಂಪತಿ ಬೈಕ್‌ನಲ್ಲಿ ಹೋಗುತ್ತಿರುವಾಗ ಯುವತಿಯ ಸಹೋದರ ಹಾಗು ಇನ್ನೊಬ್ಬ ಸಂಬಂಧಿ ಬೇರೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಮಾರ್ಗಮಧ್ಯೆ ದಂಪತಿಗಳನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್‌ನಿಂದ ದಲಿತ ಯುವಕ ತಲೆಗೆ ಹೊಡೆದಿದ್ದಾರೆ. ಬಳಿಕ ಚಾಕುವಿನಿಂದ ಇರಿಯುತ್ತಾರೆ. ಕೃತ್ಯವನ್ನು ತಡೆಯಲು ಬಂದ ಸಾರ್ವಜನಿಕರಿಗೂ ಈ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ ಬಿಲ್ಲಿಪುರಂ ನಾಗರಾಜು ಮೇಲೆ ಹಲ್ಲೆ ಮಾಡಿದ್ದು ಇಬ್ಬರಾದರೆ, ನಾಗರಾಜು ಪತ್ನಿ ಸಯದಾ ಅಶ್ರಿನ್ ಸುಲ್ತಾನ ಪ್ರಕಾರ ಈ ದಾಳಿಯಲ್ಲಿ ಐವರು ಭಾಗಿಯಾಗಿದ್ದಾರೆ.

ಶಾಲಾ ದಿನದಿಂದಲೂ ಪ್ರೇಮ: ಅಶ್ರಿನ್ ಮತ್ತು ನಾಗರಾಜು ಇಬ್ಬರೂ ಹತ್ತನೇ ತರಗತಿಯಲ್ಲಿದ್ದಾಗಿನಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಅಶ್ರಿನ್‌ಳನ್ನು ಮದುವೆಯಾಗುವುದಾಗಿ ನಾಗರಾಜು ಆಕೆಯ ಮನೆಯವರ ಬಳಿ ಕೇಳಿರುತ್ತಾರೆ. ಆದರೆ ಕುಟುಂಬದವರು ಒಪ್ಪಿರಲಿಲ್ಲ. ಇಸ್ಲಾಮ್‌ಗೆ ಮತಾಂತರ ಆಗುತ್ತೇನೆಂದರೂ ಮದುವೆಗೆ ಅನುಮತಿ ಸಿಕ್ಕಿರಲಿಲ್ಲ. "ನಾನು ಇಸ್ಲಾಮ್‌ಗೆ ಮತಾಂತರ ಆಗುತ್ತೇನೆ ಎಂದು ನನ್ನ ತಾಯಿಗೆ ಅವನು ಹೇಳಿದ್ದ. ಆದರೂ ಕೂಡ ಮನೆಯವರು ಈ ಮದುವೆಗೆ ಒಪ್ಪಿಗೆ ಕೊಡಲಿಲ್ಲ" ಎಂದು ಅಶ್ರಿನ್ ಹೇಳಿದ್ದಾರೆ.
ಬಿಲ್ಲಿಪುರಂ ನಾಗರಾಜು ಪರಿಶಿಷ್ಟ ಜಾತಿಗೆ ಸೇರಿದ ಮಾಲ ಸಮುದಾಯದವನಾಗಿದ್ದಾನೆ. ರಂಗಾರೆಡ್ಡಿ ಜಿಲ್ಲೆಯ ಮಾರಪಲ್ಲೆ ಎಂಬ ಊರಿನವನು. ಇನ್ನು, ಅಶ್ರಿನ್ ಅದೇ ಜಿಲ್ಲೆಯ ಘಾನಾಪುರ್ ಗ್ರಾಮದವಳಾಗಿದ್ದಾಳೆ. ಮನೆಯವರ ವಿರೋಧದ ನಡುವೆ ಜನವರಿ 31ರಂದು ಹೈದರಾಬಾದ್‌ನ ಆರ್ಯ ಸಮಾಜ ಪದ್ಧತಿಯಂತೆ ಇಬ್ಬರೂ ವಿವಾಹವಾಗಿದ್ದರು.
ಮದುವೆ ಬಳಿಕ ಈ ಜೋಡಿಯು ಸರೂರ್‌ನಗರ್‌ನಲ್ಲಿ ವಾಸ್ತವ್ಯ ಹೂಡಿದ್ದರು. ನಾಗರಾಜು ಕಾರ್ ಶೋರೂಮ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅಶ್ರಿನ್ ಕುಟುಂಬದ ಇತರ ಸದಸ್ಯರ ಚಲನವಲನದ ಬಗ್ಗೆ ಸಂಶಯ ಬಂದು ಇಬ್ಬರೂ ಕೆಲ ಕಾಲ ವಿಶಾಖಪಟ್ಟಣಂಗೆ ಹೋಗಿ ಮತ್ತೆ ಸರೂರ್ ನಗರ್‌ಗೆ ವಾಪಸ್ ಬಂದಿರುತ್ತಾರೆ. ಆದರೆ, ಅಶ್ರಿನ್‌ನ ಮನೆಯವರು ಇವರ ಮನೆ ಪತ್ತೆ ಮಾಡಿದ್ದರು.

ಹಿಂದೂ ಮುಸ್ಲಿಂ ವಿವಾಹವಾದ್ದರಿಂದ ಸಹಜವಾಗಿ ಇದು ಬಿಜೆಪಿಗೆ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ. ಇಲ್ಲಿಯ ಸ್ಥಳೀಯ ಬಿಜೆಪಿ ಕಾರ್ಯಕರ್ತರು ನಾಗರಾಜು ಕೊಲೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಾ, 'ಜೈ ಶ್ರೀರಾಮ್' ಘೋಷಣೆಗಳನ್ನು ಕೂಗಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ಧಾರೆ.
ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. "ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿರುವ ಪ್ರಕಾರ, ಕೊಲೆಯ ಹಿಂದೆ ಇಬ್ಬರು ವ್ಯಕ್ತಿಗಳಿದ್ದಾರೆ. ಐರನ್ ರಾಡ್ ಮತ್ತು ಚಾಕುವಿನಿಂದ ಕೊಲೆ ಮಾಡಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆದರೆ, ಕೊಲೆಯ ಉದ್ದೇಶ ಸ್ಪಷ್ಟ ಇದೆ. ಬೇರೆ ಧರ್ಮೀಯ ಎನ್ನುವ ಕಾರಣಕ್ಕೆ ಹತ್ಯೆ ನಡೆದಿದೆ" ಎಂದು ಸರೂರ್‌ನಗರ್ ಇನ್ಸ್‌ಪೆಕ್ಟರ್ ಕೆ. ಸೀತಾರಾಮ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications