ಆಂಧ್ರ, ಒರಿಸ್ಸಾಕ್ಕೆ ಫೈಲಿನ್ ಚಂಡಮಾರುತ ಭೀತಿ
ಹೈದರಾಬಾದ್, ಅ.10 : ಪ್ರತ್ಯೇಕ ರಾಜ್ಯ ವಿರೋಧಿ ಹೋರಾಟದಲ್ಲಿ ಮುಳುಗಿರುವ ಆಂಧ್ರಪ್ರದೇಶಕ್ಕೆ ಚಂಡಮಾರುತದ ಭೀತಿ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಫೈಲಿನ್ ಚಂಡಮಾರುತ ಶನಿವಾರ ಸಂಜೆ ವೇಳೆಗೆ ಆಂಧ್ರಪ್ರದೇಶ ಹಾಗೂ ಒರಿಸ್ಸಾ ರಾಜ್ಯಗಳಿಗೆ ಅಪ್ಪಳಿಸಲಿದೆ.
ಹವಾಮಾನ ಇಲಾಖೆ ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳ ಕರಾವಳಿ ತೀರಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಕರ್ನಾಟಕಕ್ಕೂ 'ಫೈಲಿನ್' ಚಂಡಮಾರುತದ ಬಿಸಿ ತಟ್ಟುವ ಸಾಧ್ಯತೆ ಇದ್ದು, ರಾಜ್ಯದಲ್ಲೂ ಮಳೆಯಾಗುವ ಸಂಭವವಿದೆ.

ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನ 650 ಕಿ.ಮಿ ದೂರದಲ್ಲಿ ಈ ಚಂಡಮಾರುತ ಕೇಂದ್ರೀಕೃತವಾಗಿದ್ದು, ಸುಮಾರು 205 ರಿಂದ 210 ಕಿ.ಮೀ ವೇಗದಲ್ಲಿ ಆಂಧ್ರ ಹಾಗೂ ಒರಿಸ್ಸಾದತ್ತ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಫೈಲಿನ್ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರ ಮತ್ತು ಒರಿಸ್ಸಾದ ಕರಾವಳಿ ತೀರ ಪ್ರದೇಶದಲ್ಲಿರುವ 10 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮನೆಯಿಂದ ಹೊರ ಬರದಂತೆ ಮತ್ತು ಸಮುದ್ರಕ್ಕೆ ಇಳಿಯದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಆಂಧ್ರದ ಕೆಲವು ಪ್ರದೇಶಗಳಿಗೆ ಫೈಲಿನ್ ಎಫೆಕ್ಟ್ ತಟ್ಟಿದ್ದು, ಶುಕ್ರವಾರ ಬೆಳಗ್ಗೆಯಿಂದಲ್ಲೇ ಮಳೆರಾಯನ ಆರ್ಭಟ ಆರಂಭವಾಗಿದೆ.
ಫೈಲಿನ್ ಎಫೆಕ್ಟ್‌ನಿಂದಾಗಿ ಪರಾದೀಪ್, ಕಳಿಂಗ ಪಟ್ಟಣಂ ಗಂಗವರಂ, ಕಾಕಿನಾಡ ಹಾಗೂ ನಿಜಾಂಪಟ್ಟಣಂನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಪ್ರಮಾಣದ ಚಂಡಮಾರುತ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಒರಿಸ್ಸಾ ಸರ್ಕಾರ ಈಗಾಗಲೇ ಚಂಡಮಾರುತ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿದ್ಧತೆಗಳ ಕುರಿತು ಸಭೆ ನಡೆಸಿದ್ದಾರೆ.












Click it and Unblock the Notifications