ಜಿಎಚ್‌ಎಂಸಿ ಚುನಾವಣೆ ಟಿಆರ್‌ಎಸ್‌ಗೆ ಸ್ಪಷ್ಟ ಸಂದೇಶ!
ಹೈದರಾಬಾದ್, ಡಿಸೆಂಬರ್ 04 : "ಜನರು ಬದಲಾವಣೆ ಬಯಸಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಜಿಎಚ್‌ಎಂಸಿ ಚುನಾವಣೆಯ ಫಲಿತಾಂಶ ಟಿಆರ್‌ಎಸ್ ಪಕ್ಷಕ್ಕೆ ರವಾನೆ ಮಾಡಿದೆ" ಎಂದು ತೆಲಂಗಾಣ ಬಿಜೆಪಿ ಸಂಸದ ಡಿ. ಅರವಿಂದ್ ಹೇಳಿದರು.
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯುತ್ತಿದೆ. ಪ್ರಾಥಮಿಕವಾಗಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. 150 ವಾರ್ಡ್‌ಗಳಿಗೆ ನೆಡೆದ ಚುನಾವಣೆ ಮತ ಎಣಿಕೆಯ ಸ್ಪಷ್ಟ ಫಲಿತಾಂಶ ಸಂಜೆಯ ವೇಳೆಗೆ ಬರುವ ನಿರೀಕ್ಷೆ ಇದೆ.
ಎಎನ್‌ಐ ಜೊತೆ ಮಾತನಾಡಿದ ಸಂಸದ ಡಿ. ಅರವಿಂದ್, "ಟಿಆರ್‌ಎಸ್ ಪಕ್ಷಕ್ಕೆ ಇದು ಸ್ಪಷ್ಟವಾದ ಸಂದೇಶ. ಜನರು ಬದಲಾವಣೆಯನ್ನು ಬಯಸಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಬದಲಾವಣೆ ಪಕ್ರಿಯೆ ಆರಂಭವಾಗಿದೆ" ಎಂದರು.

"ಲೋಕಸಭೆ ಚುನಾವಣೆ, ದುಬ್ಬಕ್ಕ ಕ್ಷೇತ್ರದ ಉಪ ಚುನಾವಣೆ, ಈಗ ಜಿಎಚ್‌ಎಂಸಿ ಚುನಾವಣೆಯನ್ನು ನೋಡಿ. ಫಲಿತಾಂಶಕ್ಕಾಗಿ ಸಂಜೆಯ ತನಕ ಕಾಯೋಣ. ಆದರೆ, ಜನರು ಬದಲಾವಣೆ ಬಯಸಿದ್ದಾರೆ ಎಂಬ ಸಂದೇಶ ಸ್ಪಷ್ಟ" ಎಂದು ಸಂಸದರು ತಿಳಿಸಿದರು.
ಟಿಆರ್‌ಎಸ್ ಪಕ್ಷದ ನಾಯಕಿ ಕೆ. ಕವಿತಾ ಅವರು, "ನಾವು 100 ಸ್ಥಾನಗಳ ನಿರೀಕ್ಷೆಯಲ್ಲಿದ್ದೇವೆ. ಬಿಜೆಪಿ ನಾಯಕರು ಚುನಾವಣಾ ಪ್ರಚಾರಕ್ಕೆ ಬಂದು ಸುಳ್ಳನ್ನು ಹೇಳಿದ್ದಾರೆ. ಆದರೆ, ಜನರು ಕೆಎಸ್ಆರ್ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ" ಎಂದು ಹೇಳಿದ್ದಾರೆ.
150 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಸದ್ಯದ ಮಾಹಿತಿಯಂತೆ ಬಿಜೆಪಿ 51 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಟಿಆರ್‌ಎಸ್ ಪಕ್ಷ 20 ಸ್ಥಾನದಲ್ಲಿ ಮುನ್ನಡೆ ಪಡೆದಿದೆ. ಓವೈಸಿ ಅವರ ಪಕ್ಷ 8 ಮತ್ತು ಕಾಂಗ್ರೆಸ್ 3 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.












Click it and Unblock the Notifications