Breaking: ಮಧ್ಯವರ್ತಿ ಆರೋಪ: ಬಿಜೆಪಿ ವಿರುದ್ಧ ಕೇಸ್ ದಾಖಲಿಸಿದ ಕೆಸಿಆರ್ ಪುತ್ರಿ
ಹೈದರಾಬಾದ್, ಆಗಸ್ಟ್ 22: ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಮತ್ತು ಲಿಕ್ಕರ್ ಮಾಫಿಯಾದ ನಡುವೆ ಮಧ್ಯವರ್ತಿ ಎಂದು ಆರೋಪಿಸಿದ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಸೋಮವಾರ ಹೇಳಿದ್ದಾರೆ.
ಎಂಎಲ್‌ಸಿ ಕೆ ಕವಿತಾ ಅವರನ್ನು ಮಧ್ಯವರ್ತಿ ಎಂದು ಆರೋಪಿಸಿದ್ದ ಬಿಜೆಪಿ ನಾಯಕರಾದ ಸಂಸದ ಪರ್ವೇಶ್ ವರ್ಮಾ ಮತ್ತು ಮಾಜಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದಾರೆ.
"ನನ್ನ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರ. ದೆಹಲಿ ಅಬಕಾರಿ ಹಗರಣದಲ್ಲಿ ಹೇಳಿರುವ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಕೈಯಲ್ಲಿ ಎಲ್ಲಾ ಏಜೆನ್ಸಿಗಳಿವೆ, ಅವರು ಏನು ತನಿಖೆ ಬೇಕಾದರೂ ಮಾಡಬಹುದು. ನಾವು ಸಂಪೂರ್ಣವಾಗಿ ಸಹಕರಿಸುತ್ತೇವೆ" ಕೆ ಕವಿತಾ ಹೇಳಿದ್ದಾರೆ.

ಕೇಂದ್ರ ಸರಕಾರದ ನೀತಿಗಳನ್ನು ಟೀಕಿಸುವಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಧ್ವನಿಯಾಗಿರುವುದರಿಂದ ಬಿಜೆಪಿ ನನ್ನ ಮೇಲೆ ಈ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
"ಈ ರೀತಿಯ ಆರೋಪಗಳಿಗೆ ನಾವು ಭಯಪಡುವುದಿಲ್ಲ" ಎಂದಿರುವ ಅವರು, ಹೋರಾಟಗಾರರನ್ನು ಒಳಗೊಂಡಿರುವ ಕುಟುಂಬದಿಂದ ಬಂದ ತಾವು ಹೋರಾಡುವುದಾಗಿ ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸಂಸದ ಪರ್ವೇಶ್ ವರ್ಮಾ ಮತ್ತು ಮಾಜಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ, ಲಿಕ್ಕರ್ ಮಾಫಿಯಾ ಮತ್ತು ಎಎಪಿ ಸರ್ಕಾರದ ನಡುವೆ ಕವಿತಾ ಮಧ್ಯವರ್ತಿಯಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಯ ರಚನೆಯ ಸಭೆಗಳಲ್ಲಿ ಕೆಸಿಆರ್ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು ಎಂದು ಅವರು ಆರೋಪಿಸಿದ್ದರು.
"ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಕುಟುಂಬ ಸದಸ್ಯರು ಹೋಟೆಲ್‌ನಲ್ಲಿ ದೆಹಲಿಯ ಅಬಕಾರಿ ನೀತಿಯನ್ನು ರೂಪಿಸುವ ಸಭೆಗಳಲ್ಲಿ ಭಾಗವಹಿಸಿದ್ದರು. ಕೆಸಿಆರ್ ಅವರ ಕುಟುಂಬ ಸದಸ್ಯರು ಪಂಜಾಬ್‌ನಲ್ಲಿ ಅದೇ ನೀತಿಯನ್ನು ಜಾರಿಗೆ ತಂದರು. ಅವರು ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೆಹಲಿಗೆ ಅಬಕಾರಿ ಯೋಜನೆಯನ್ನು ಸಿದ್ಧಪಡಿಸಿದರು" ಎಂದು ಪರ್ವೇಶ್ ವರ್ಮಾ ಹೇಳಿದ್ದರು.
ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸಿಬಿಐ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಿದೆ. ಕಳೆದ ಶುಕ್ರವಾರ ಸಿಸೋಡಿಯಾ ಅವರ ಮನೆ ಮತ್ತು ಇತರ 30 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.












Click it and Unblock the Notifications