ಆಂಧ್ರಪ್ರದೇಶಕ್ಕೆ ಬರಲಿದೆ ಹೆಲನ್ ಚಂಡಮಾರುತ
ಹೈದರಾಬಾದ್, ನ. 21 : ಕೆಲವು ದಿನಗಳ ಹಿಂದೆ ಫೈಲಿನ್ ಚಂಡಮಾರುತದ ಸುಳಿಗೆ ಸಿಲುಕಿದ್ದ ಆಂಧ್ರಪ್ರದೇಶದಕ್ಕೆ ಸದ್ಯ ಹೆಲನ್ ಕಾಟ ಆರಂಭವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಿರುವ ಹೆಲನ್ ಚಂಡಮಾರುತ ಗುರುವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ. ಕರ್ನಾಕಟದಲ್ಲೂ ಒಂದು ವಾರ ಹೆಲನ್ ಪ್ರಭಾವವಿರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೆಲನ್ ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಿಗೆ ಗುರುವಾರ ರಾತ್ರಿ ಅಪ್ಪಳಿಸಲಿದ್ದು, ತಮಿಳುನಾಡು, ಪುದುಚೇರಿ, ಕರ್ನಾಟಕದಲ್ಲಿಯೂ ಚಂಡಮಾರುತದ ಪ್ರಭಾವದಿಂದಾಗಿ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತವು ಗಂಟೆಗೆ 110 ರಿಂದ 120 ಕಿ.ಮೀ.ವೇಗದಲ್ಲಿ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹೆಲನ್ ಆರ್ಭಟದಿಂದಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರ ಪ್ರದೇಶದ ನೆಲ್ಲೂರು, ಪ್ರಕಾಶಂ, ಗುಂಟೂರು ಹಾಗೂ ಕೃಷ್ಣ ಜಿಲ್ಲೆಗಳಲ್ಲಿ ಹೆಲನ್ ಚಂಡಮಾರುತದ ಪ್ರಭಾವ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಆಂಧ್ರಪ್ರದೇಶ ಸರ್ಕಾರ ಹೆಲನ್ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. (ಚಿತ್ರಗಳಲ್ಲಿ ನೋಡಿ ಫೈಲಿನ್ ಅಬ್ಬರ)
ಬೆಂಗಳೂರಿನಲ್ಲಿ ಮಳೆ : ಕರ್ನಾಟಕದಲ್ಲೂ ಹೆಲನ್ ಪ್ರಭಾವ ಬೀರಲಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ನ.22ರಿಂದ ಒಂದು ವಾರ ವ್ಯಾಪಕ ಮಳೆಯಾಗುವ ಸಂಭವವಿದೆ. ಬೆಂಗಳೂರು, ಕೋಲಾರ, ತುಮಕೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ : ಹೆಲನ್ ಚಂಡಮಾರುತದ ಪ್ರಭಾವದಿಂದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯಾಗುವ ಸಾಧ್ಯತೆ ಇದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯ ಗುರುವಾರ ಕೊಚ್ಚಿಯಲ್ಲಿ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ನ.24ರಂದು ವಿಶಾಖಪಟ್ಟಣದಲ್ಲಿ ಮತ್ತು ನ.27ರಂದು ಕಾನ್ಪುರದಲ್ಲಿ ಪಂದ್ಯಗಳು ನಡೆಯಲಿವೆ. ಗುರುವಾರದ ಪಂದ್ಯ ನಡೆದರೂ ಉಳಿದ ಪಂದ್ಯಕ್ಕೆ ಹೆಲನ್ ಅಡ್ಡಿ ಉಂಟುಮಾಡುವ ಆತಂಕವಿದೆ.












Click it and Unblock the Notifications