PUC ಹಾಗೂ CET ಪರೀಕ್ಷೆಗೆ ಇನ್ಮುಂದೆ ಒಂದೇ ಅರ್ಜಿ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಇಎ ಕ್ರಾಂತಿಕಾರಿ ನಿರ್ಧಾರ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇದು ನಿಜಕ್ಕೂ ನೆಮ್ಮದಿ ತರುವ ಸುದ್ದಿ. ಎಂಜಿನಿಯರಿಂಗ್, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಇನ್ನು ಮುಂದೆ ಪ್ರತ್ಯೇಕ ಅರ್ಜಿ ಹಾಕುವಂತಿಲ್ಲ. ಎರಡಕ್ಕೂ ಸೇರಿ ಒಂದೇ ಅರ್ಜಿಯನ್ನು ಸಲ್ಲಿಸುವ ವಿನೂತನ ಹಾಗೂ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಪ್ರತಿ ವರ್ಷ ಸಿಇಟಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದಾಗ ಸರ್ವರ್ ಡೌನ್ ಸಮಸ್ಯೆ, ತಾಂತ್ರಿಕ ದೋಷಗಳು, ವೆಬ್‌ಸೈಟ್ ಹ್ಯಾಂಗ್ ಆಗುವಂತಹ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿದ್ದವು. ಇದರಿಂದ ಸೈಬರ್ ಸೆಂಟರ್‌ಗಳ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇತ್ತು. ಇವೆಲ್ಲದಕ್ಕೂ ಶಾಶ್ವತ ಮುಕ್ತಿ ನೀಡಲು ಪ್ರಾಧಿಕಾರ ಈ ಕ್ರಾಂತಿಕಾರಿ ನಿಯಮವನ್ನು ರೂಪಿಸಿದೆ. ವಿದ್ಯಾರ್ಥಿಗಳಿಗೆ ಸಿಇಟಿ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ, ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಇಎ ಹಾಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಂಟಿಯಾಗಿ ಈ ಯೋಜನೆಗೆ ಕೈಜೋಡಿಸಿವೆ.

KEA

ಏನಿದು ಹೊಸ ನಿಯಮ?

ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ಸಾಲಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಪ್ರತ್ಯೇಕವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿಯೇ, ಕಾಲೇಜುಗಳಲ್ಲಿ ನೀಡಲಾಗುವ ಅರ್ಜಿಯಲ್ಲಿ 'ಸಿಇಟಿ ಆಯ್ಕೆ'ಯನ್ನು ನಮೂದಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸಿಇಟಿ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಅಲ್ಲಿಯೇ ನಿಗದಿತ ಶುಲ್ಕವನ್ನು ಪಾವತಿಸಬಹುದು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಪರೀಕ್ಷಾ ಸಮಯದಲ್ಲಿ ನೇರವಾಗಿ ಪ್ರವೇಶಪತ್ರ ಪಡೆಯುವ ಸರಳ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ತಪ್ಪುಗಳ ಸರಮಾಲೆಗೆ ಬ್ರೇಕ್

ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆಯ ಭರದಲ್ಲಿ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡದಲ್ಲಿರುತ್ತಾರೆ. ಈ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಸಿಇಟಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ವಿಫಲರಾಗುತ್ತಿದ್ದರು. ಇನ್ನು ಖಾಸಗಿ ಸೈಬರ್ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಹೆಸರು, ಪೋಷಕರ ಹೆಸರು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆರ್​ಡಿ ನಂಬರ್, ಮೀಸಲಾತಿ ಕೋಟಾ ಸೇರಿದಂತೆ ಅನೇಕ ಪ್ರಮುಖ ಮಾಹಿತಿಗಳನ್ನು ತಪ್ಪಾಗಿ ದಾಖಲಿಸುತ್ತಿದ್ದರು.

ಈ ತಪ್ಪುಗಳಿಂದಾಗಿ ಕೌನ್ಸಿಲಿಂಗ್ ಮತ್ತು ದಾಖಲಾತಿ ಪರಿಶೀಲನೆ ವೇಳೆ ವಿದ್ಯಾರ್ಥಿಗಳು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈಗ ದ್ವಿತೀಯ ಪಿಯುಸಿಗೆ ದಾಖಲಾಗುವಾಗ ಕಾಲೇಜು ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ನೇರ ಉಸ್ತುವಾರಿಯಲ್ಲೇ ಕಂಪ್ಲೀಟ್ ಮಾಹಿತಿ ಹಾಗೂ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದರಿಂದ ಯಾವುದೇ ರೀತಿಯ ತಪ್ಪುಗಳಾಗುವ ಸಂಭವ ಇರುವುದಿಲ್ಲ.

ಒತ್ತಡ ನಿವಾರಣೆಗೆ ಸಹಕಾರಿ

ಈ ಹೊಸ ಕೆಇಎ ಒಂದೇ ಅರ್ಜಿ ವ್ಯವಸ್ಥೆ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ಅವರು, "ಪಿಯುಸಿ ಅರ್ಜಿಯನ್ನೇ ಸಿಇಟಿಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕಾಲೇಜು ಹಂತದಲ್ಲೇ ಪ್ರಾಥಮಿಕ ದಾಖಲೆಗಳ ಪರಿಶೀಲನೆ ನಡೆಯುವುದರಿಂದ ಭವಿಷ್ಯದಲ್ಲಿ ಆಗುವ ಗೊಂದಲಗಳು ನಿವಾರಣೆಯಾಗಲಿವೆ. ಇದರಿಂದ ವಿದ್ಯಾರ್ಥಿಗಳ ಅಮೂಲ್ಯ ಸಮಯ ವ್ಯಯವಾಗುವುದು ತಪ್ಪಲಿದ್ದು, ಪರೀಕ್ಷಾ ಸಮಯದಲ್ಲಿ ಕಾಡುವ ಮಾನಸಿಕ ಒತ್ತಡವೂ ಸಂಪೂರ್ಣವಾಗಿ ಕಡಿಮೆಯಾಗಲಿದೆ" ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರಾಧಿಕಾರದ ಈ ದಿಟ್ಟ ನಿರ್ಧಾರವು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕವನ್ನು ದೂರ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+