ಸುಷ್ಮಾ ಸ್ವರಾಜ್ ಬೆಂಬಲಕ್ಕೆ ನಿಂತ ಅಸಾದುದ್ದಿನ್ ಓವೈಸಿ
ಹೈದರಾಬಾದ್, ಜುಲೈ 03: 'ತಾಕತ್ತಿದ್ದರೆ ಹೈದರಾಬಾದಿನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಿ' ಎಂದು ಇತ್ತೀಚೆಗಷ್ಟೇ ಅಮಿತ್ ಶಾ, ಮೋದಿ ಮತ್ತು ಕಾಂಗ್ರೆಸ್ಸಿಗರಿಗೆ ಸವಾಲೆಸೆದಿದ್ದ ಅಸಾದುದ್ದಿನ್ ಓವೈಸಿ, ಇದೀಗ ಸುಷ್ಮಾ ಸ್ವರಾಜ್ ಬೆಂಬಲಕ್ಕೆ ನಿಂತಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಎದ್ದಿದ್ದ ಟ್ರೋಲ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖಂಡ ಓವೈಸಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ತಮ್ಮ ವಿರುದ್ಧ ನಡೆದ ಟ್ರೋಲ್ ಅನ್ನು ಬೆಂಬಲಿಸುತ್ತೀರಾ?' ಎಂದು ಟ್ವಿಟ್ಟರ್ ನಲ್ಲಿ ಸುಷ್ಮಾ ಆರಂಭಿಸಿದ್ದ ಪೋಲ್ ಗೆ ಬಿಜೆಪಿ ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ.
ಅವರದೇ ಪಕ್ಷದ ನಾಯಕರು ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಆದರೆ ನಾವು ಅವರನ್ನು ಬೆಂಬಲಿಸುತ್ತೇವೆ. ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದ ಟ್ರೋಲ್ ಅನ್ನು ನಾವು ಖಂಡಿಸುತ್ತೇವೆ ಎಂದು ಓವೈಸಿ ಹೇಳಿದ್ದಾರೆ.

ಹೈದರಾಬಾದ್ ಸಂಸದರೂ ಆಗಿರುವ ಓವೈಸಿ, ಸುಷ್ಮಾ ವಿರುದ್ಧ ಹುಟ್ಟಿದ್ದ ಟ್ರೋಲ್ ಹಿಂದೆ ಬಿಜೆಪಿಯವರೇ ಕೆಲವರಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂತರ್ಧರ್ಮೀಯ ದಂಪತಿಯ ಪಾಸ್ ಪೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಈ ಟ್ರೋಲ್ ಆರಂಭವಾಗಿತ್ತು. ಈ ಸಂಬಂಧ ವಿವಾದ ಸೃಷ್ಟಿಸಿದ್ದ ಅಧಿಕಾರಿಯನ್ನು ಸುಷ್ಮಾ ಸ್ವರಾಜ್ ಎತ್ತಂಗಡಿ ಮಾಡಿಸಿದ್ದರು. ಈ ಮೂಲಕ ಮುಸ್ಲಿಂ ಓಲೈಕೆಗೆ ಅವರು ತೊಡಗಿದ್ದಾರೆ ಎಂದು ಅವರನ್ನು ಟ್ರೋಲ್ ಮಾಡಲಾಗಿತ್ತು.












Click it and Unblock the Notifications