ಮಹಾದಾಯಿ ಯೋಜನೆ ಜಾರಿ ನಿರ್ಲಕ್ಷ್ಯದ ಬಗ್ಗೆ ಲಿಖಿತ ಉತ್ತರ ಬೇಕು: ಸಂತೋಷ್ ಲಾಡ್
ಹುಬ್ಬಳ್ಳಿ, ಸೆಪ್ಟಂಬರ್ 10: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಉತ್ತರ ಕರ್ನಾಟಕದ ಜೀವನಾಡಿ ಮಹದಾಯಿ ನದಿ ನೀರು ಯೋಜನೆಗೆ ಕ್ಲಿಯರೆನ್ಸ್ ಕೊಡುತ್ತೇವೆ. ಯೋಜನೆ ಜಾರಿಗೆ ತರುತ್ತೇವೆ ಎಂದೆಲ್ಲ ಹೇಳಿದ್ದರು. ಈವರೆಗೆ ಈ ಯೋಜನೆಗೆ ಅನುಮೋದನೆ ಏಕೆ ನೀಡಿಲ್ಲ. ಈ ಬಗ್ಗೆ ಬಿಜೆಪಿ ಲಿಖಿತವಾಗಿ ಉತ್ತರಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಂಗಳವಾರ ಮಾತನಾಡಿದ ಅವರು, ಮಹದಾಯಿಗೆ ಏಕೆ ಇದುವರೆಗೆ ಕ್ಲಿಯರೆನ್ಸ್ ಕೊಡಲಾಗುತ್ತಿಲ್ಲ ಎಂಬುದರ ಬಗ್ಗೆ ಕೇಂದ್ರವು ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಉತ್ತರ ನೀಡಲಿ. ಪರಿಸರ ಕ್ಲಿಯರೆನ್ಸ್ ನೀಡಲು ಎಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಸರಿಯಾಗಿ ತಿಳಿಸಬೇಕು ಎಂದು ಕಿಡಿ ಕಾರಿದರು.

ಕೇಂದ್ರ ಮಂತ್ರಿಗಳು ರಾಜ್ಯಕ್ಕೆ ಬಂದು ಸರ್ಕಾರಕ್ಕೆ ಬಯ್ಯುವುದು ಒಂದೇ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಎಷ್ಟು ಉಗ್ರರ ದಾಳಿಯಾಗಿದೆ. ಅದರ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಾತನಾಡುತ್ತಾರಾ? ಈ ಹಿಂದೆ ಕರ್ನಾಟಕ, ಗೋವಾ, ಕೇಂದ್ರ, ಜತೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿಯವರದೇ ಸರ್ಕಾರಗಳಿದ್ದರೂ, ಮಹಾದಾಯಿ ಯೋಜನೆ ಮಾತ್ರ ಸಾಕಾರಗೊಳ್ಳುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಹದಾಯಿ ಬಗ್ಗೆ ಪ್ರಹ್ಲಾದ್ ಜೋಶಿ ಮಾತನಾಡಲಿ
ನೆರೆಯ ರಾಜ್ಯಗಳಿಗೆ ಪವರ್ ಲೈನ್ ಹೋಗಲು ಕ್ಲಿಯರೆನ್ಸ್ ನೀಡಿದ್ದಾರೆ. ಆದರೆ ಕರ್ನಾಟಕ ರಾಜ್ಯದ ಮಹಾದಾಯಿಗೆ ಕ್ಲಿಯರೆನ್ಸ್ ನೀಡಲು ಮಾತ್ರ ಬಿಜೆಪಿಗೆ ಏಕೆ ಆಗುತ್ತಿಲ್ಲ? ಈ ವಿಚಾರಗಳ ಬಗ್ಗೆ ಪ್ರಹ್ಲಾದ್ ಜೋಶಿಯವರು ಮೊದಲು ಮಾತನಾಡಬೇಕು ಎಂದು ಲಾಡ್ ಆಗ್ರಹಿಸಿದರು.

ಈಗ ಮಹದಾಯಿ ವಿಚಾರವಾಗಿ ಸರ್ವಪಕ್ಷ ನಿಯೋಗ ಹೋಗುತ್ತಿದೆ. ಈ ಹಿಂದೆ ಇವರು ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ? ರಾತ್ರೋರಾತ್ರೀ ಬಾಕಿಯಿರುವ ಕೆಲಸವನ್ನು ಮೋದಿಯವರು ಕ್ಲಿಯರ್ ಮಾಡುತ್ತಾರೆ ಎಂದು ಕೇಳಿದ್ದೇವೆ. ಅದೇ ರೀತಿ ಉತ್ತರ ಕರ್ನಾಟಕದ ಬಹುಭಾಗಕ್ಕೆ ನೀರಾವರಿ, ಕುಡಿಯಲು ನೀರು ಒದಗಿಸುವ ಮಹಾದಾಯಿಗೊಂದು ಅನುಮೋದನೆ ನೀಡಲಿ ಎಂದು ಹೇಳಿದರು.
ಈಗ ಅಕ್ಕಿ ವಿತರಣೆಗೆ ಒಪ್ಪಿದ್ದೇಕೆ?
ಪಡಿತರ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣದ ಇಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು,ಆಹಾರ ಭದ್ರತೆ ಕಾಯ್ದೆ ತಂದವರು ಕಾಂಗ್ರೆಸ್ ನಾಯಕರು. ಪ್ರಧಾನಿ ಮೋದಿಯವರ ಅಕ್ಕಿ ವಿತರಣೆ ಬಗ್ಗೆ ಮಾತನಾಡುತ್ತಾರೆ. ಈ ಹಿಂದೆ ಅನ್ನಭಾಗ್ಯಕ್ಕೆ ಅಕ್ಕಿ ಕೇಳಿದಾಗ ರಾಜ್ಯ ಕೊಡದ ಕೇಂದ್ರ ಸರ್ಕಾರ ಈ ಹಿಂದೆ ಯಾಕೆ ನಮಗೆ ಕೊಡಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಅಕ್ಕಿ ಪೂರೈಸುವಂತೆ ಕೇಳಿ ಕೊಂಡಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಹಿಂದೆ ಯಾಕೆ ಅಕ್ಕಿ ಕೊಡಲಿಲ್ಲ, ಈಗ ಕೊಡುತ್ತೇವೆ ಎನ್ನುತ್ತಿರುವುದು ಏಕೆ?. ಕಾರಣವೇನು ಎಂದು ಅವರು ಲಿಖಿತವಾಗಿ ಉತ್ತರಿಸಲಿ ಎಂದು ತಿಳಿಸಿದರು.












Click it and Unblock the Notifications