ಉಡುಪಿ ಪ್ರಕರಣ ಮಾಸುವ ಮುನ್ನವೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಘಟನೆ, ಪೊಲೀಸ್ ಕಮಿಷನರ್ ಹೇಳಿದ್ದೇನು?
ಹುಬ್ಬಳ್ಳಿ, ಆಗಸ್ಟ್, 04: ಉಡುಪಿಯ ವಿಡಿಯೋ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ ನಗರ ಕಾಲೇಜೊಂದರ ಹೆಸರನ್ನು ಬಳಸಿಕೊಂಡು ಖಾಸಗಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋಗಳನ್ನು ಅಪ್‌ಲೋಡ್ ಮಾಡಿದ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಸೈಬರ್ ವಂಚಕರಿಗೆ ವಿದ್ಯಾನಗರದ ಪಿಯು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ಇದರಿಂದ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಪಾಲಕರು ಆತಂಕಗೊಂಡಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲ ಕಾಲೇಜಿನ ವಿದ್ಯಾರ್ಥಿಗಳ ಇನಸ್ಟಾಗ್ರಾಮ್ ಹ್ಯಾಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿರುವ ವಿದ್ಯಾರ್ಥಿನಿಯರ ಫೋಟೊಗಳು ಎಡಿಟ್ ಆಗಿದ್ದು, ಇವುಗಳು ವೈರಲ್ ಆಗುತ್ತಿವೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಇನ್ನು ಕಾಲೇಜಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಕಾನೂನು ಮತ್ತು ಸುವ್ಯವಸ್ತೆ ಡಿಸಿಪಿ ಗೋಪಾಲ ಬ್ಯಾಕೋಡ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ವಿದ್ಯಾನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾಲೇಜು ಸಿಬ್ಬಂದಿ ಜೊತೆಗೆ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತಿದ್ದಾರೆ ಎನ್ನಲಾಗಿದೆ.
ಪೊಲೀಸ್ ಕಮಿಷನರ್ ಸಂತೋಷ್ ಬಾಬು ಹೇಳಿದ್ದೇನು?
ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಹಾಕುತ್ತಿರುವ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದರು. ನಾವು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯರಿಗೆ ಅನುಮಾನ ಇದ್ದವರನ್ನು ಠಾಣೆಗೆ ಕರೆದು ವಿಚಾರಣೆ ಮಾಡುತ್ತಾ ಇದ್ದೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಸಂತೋಷ್ ಬಾಬು ಹೇಳಿದರು.
ಎಷ್ಟು ಜನರನ್ನು ವಿಚಾರಣೆ ಮಾಡುತ್ತಾ ಇದ್ದೀವಿ ಅಂತಾ ಹೇಳೋಕೆ ಬರಲ್ಲ. ಕಾರಣ ಯುವತಿಯರಿಗೂ ಗೊತ್ತಿಲ್ಲ. ನಾವು ಕೂಡ ಹೇಳಲಿಕ್ಕೆ ಬರೋದಿಲ್ಲ. ಅಲ್ಲಿನ ವಿದ್ಯಾರ್ಥಿಗಲೇ ಅವರು. 15 ದಿನದ ಮುಂಚೆ ಯಾರು ಹೇಳಿರಲ್ಲ. ನಂತರ ಯುವತಿ ಈ ಬಗ್ಗೆ ತಿಳಿಸಿದ್ದಾಳೆ ಎಂದರು.
ಇವತ್ತು ಬೆಳಗ್ಗೆ ನಾಲ್ಕು ಜನ ಹುಡುಗಿಯರು ಪ್ರಕರಣ ದಾಖಲಿಸಿದ್ದು, ಇವರ ದೂರಿನ ಮೇರೆಗೆ ಕೆಲವರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡುತ್ತಾ ಇದ್ದೇವೆ. ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಈ ರೀತಿಯ ಪ್ರಕರಣಗಳು ಆಗಾಗ ಬರುತ್ತಲೇ ಇರುತ್ತವೆ. ಸದ್ಯಕ್ಕೆ ಈ ಕೇಸ್ ಕಾಲೇಜ್‌ನಲ್ಲಿ ಆಗಿರೋದು. ಕಾಲೇಜ್‌ನವರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮಾಡುತ್ತಾ ಇದ್ದೇವೆ ಎಂದರು.
ಮೂರು ತಿಂಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಕಾಲೇಜ್‌ನವರು ಮಾಹಿತಿ ಕೊಡಬೇಕಿತ್ತು ಕೊಟ್ಟಿಲ್ಲ. ಈಗ ವಿಚಾರ ಮಾಡುತ್ತಿದ್ದೇವೆ. ಅವರ ಹೆಸರು ಹೇಳೋಕೆ ಬರಲ್ಲ. ಕೆಲವು ವಿದ್ಯಾರ್ಥಿನಿಯರು ಹೇಳುವ ಪ್ರಕಾರ ಕಾಲೇಜ್‌ನಲ್ಲಿ ಯುವತಿಯರು ಮಾತಾನಾಡುವುದು ಆರೋಪಿಗೆ ಎಲ್ಲಾ ಗೊತ್ತಾಗುತ್ತಿತ್ತಂತೆ. ಹೀಗಾಗಿ ಈ ನೀಚ ಕೆಲಸ ಮಾಡಿದ್ದು ವಿದ್ಯಾರ್ಥಿ ಅನ್ನೋ ಅನುಮಾನ ವ್ಯಕ್ತವಾಗಿದೆ. ಆರೋಪಿಯನ್ನು ನಾವು ಪತ್ತೆ ಹಚ್ಚುತ್ತೇವೆ ಎಂದರು.
ನಮ್ಮ ಕೆಲಸ ತನಿಖೆ ಮಾಡಿ, ನಂತರ ಆರೋಪಿಯನ್ನು ಬಂಧಿಸುವುದಾಗಿದೆ. ಇದು ಆನ್ಲೈನ್ ಕಾಲವಾಗಿದ್ದು, ಯಾರು ಬೇಕಾದರೂ ಮನೇಲಿ ಕುಳಿತು ಈ ರೀತಿ ಮಾಡಿರಬಹುದು. ವಿದ್ಯಾರ್ಥಿಗಳ ಫೋಟೋ ಕೂಡ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದಲೇ ತಗೊಂಡಿರೋದು. ಒಂದು ಫೋಟೋ ಸಿಕ್ಕರೂ ಅದನ್ನು ಬೇರೆ ದೇಹಕ್ಕೆ ಅಳವಡಿಸಬಹುದು. ಈ ರೀತಿ ಮಾಡುವಂತ ಮಕ್ಕಳಿಗೆ ಪಾಲಕರು ಬುದ್ಧಿ ಹೇಳಬೇಕು. ಹಾಗೆಯೇ ಯುವತಿಯರು ಜಾಗೃತರಾಗಿರಬೇಕು ಎಂದು ಪೊಲೀಸ್ ಕಮಿಷನರ್ ಹೇಳಿದರು.












Click it and Unblock the Notifications