ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನೆಗೂ ಪುಂಡರು ಬೆಂಕಿ ಹಚ್ಚುತ್ತಾರೆ
ಹುಬ್ಬಳ್ಳಿ, ಆ 14: "ನಿರಂತರವಾಗಿ ಒಂದು ಕೋಮಿನವರನ್ನು ಕಾಂಗ್ರೆಸ್ಸಿನವರು ಓಲೈಸಿಕೊಂಡು ಬರುತ್ತಿರುವುದರಿಂದಲೇ, ಬೆಂಗಳೂರಿನಲ್ಲಿ ನಡೆದಂತಹ ಘಟನೆ, ಆಗಾಗ ಮರುಕಳಿಸುತ್ತಲೇ ಇರುವುದು"ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
"ಕಾಂಗ್ರೆಸ್ ತಾನೇ ಸಾಕಿದ ಗಿಣಿಯಿಂದ ಈಗ ತೊಂದರೆ ಅನುಭವಿಸುತ್ತಿದೆ. ಪುಂಡರು, ಮುಂದೊಂದು ದಿನ ವಿಧಾನಸೌಧಕ್ಕೂ ಬೆಂಕಿ ಹಚ್ಚಲು ಹಿಂದೆಮುಂದೆ ನೋಡುವುದಿಲ್ಲ" ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
"ಇವರ ಮುಸ್ಲಿಂ ಓಲೈಕೆ ಹೀಗೆ ಮುಂದುವರಿದರೆ, ಬರೆದಿಟ್ಟುಕೊಳ್ಳಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮನೆಗೂ ಈ ಪುಂಡರು ಬೆಂಕಿ ಹಚ್ಚುತ್ತಾರೆ"ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

"ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳು ದೇಶ ವಿರೋಧಿ ಕೆಲಸವನ್ನು ಮಾಡುತ್ತಿರುವುದಕ್ಕೆ ಹಲವು ದಾಖಲೆಗಳನ್ನು ನಾವು ನೀಡಿದ್ದೇವೆ. ಆದರೆ, ರಾಜ್ಯ ಸರಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ"ಎಂದು ಮುತಾಲಿಕ್, ಬಿಎಸ್ವೈ ಸರಕಾರದ ವಿರುದ್ದ ಅಪಸ್ವರ ಎತ್ತಿದ್ದಾರೆ.
"ಶೃಂಗೇರಿಯಲ್ಲೂ ಆ ಸಂಘಟನೆಯ ಸದಸ್ಯರು ಪುಂಡಾಟವನ್ನು ಮೆರೆದಿದ್ದಾರೆ. ರಾಜ್ಯ ಮತ್ತು ಕೇಂದ್ರ, ಎರಡರಲ್ಲೂ ಬಿಜೆಪಿ ಸರಕಾರವಿದೆ. ಹೀಗಿರುವಾಗ, ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಮೀನಮೇಷ ಎಣಿಸುವುದು ಸರಿಯಲ್ಲ"ಎಂದು ಮುತಾಲಿಕ್ ಹೇಳಿದ್ದಾರೆ.
"ಮೋದಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು, ಈಗ, ಕೆಲವೊಂದು ಸಂಘಟನೆಯ ವಿರುದ್ದ ಮೃದುಧೋರಣೆ ತಾಳುತ್ತಿರುವುದು ವಿಪರ್ಯಾಸ"ಎಂದು ಪ್ರಮೋದು ಮುತಾಲಿಕ್ ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications