Chilli Price: ಇಷ್ಟು ಕಡಿಮೆ ಬೆಲೆಗೆ ಒಣ ಮೆಣಸಿನಕಾಯಿ ಮಾರಲ್ಲ, ಬೆಂಕಿ ಹಚ್ಚುತ್ತೇವೆ: ರೈತರು
ಬೆಂಗಳೂರು, ಫೆಬ್ರವರಿ 02: ರಾಜ್ಯದಲ್ಲಿ ಮೆಣಸಿನಕಾಯಿ ಬೆಳೆಯುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗ ಕೈಗೆ ಬೆಳೆ ಬಂದಿದೆ. ಆದರೆ ಒಣ ಮೆಣಸಿನಕಾಯಿಗೆ (ಕೆಂಪು ಮೆಣಸಿನಕಾಯಿ) ದರ ದಿಢೀರನೇ ಕಡಿಮೆ ಮಾಡಲಾಗಿದೆ. ಇಷ್ಟು ಕಡಿಮೆ ಬೆಲೆಗೆ ನಾವು ಬೆಳೆದ ಬೆಳೆ ಮಾರುವುದಿಲ್ಲ ಎಂದು ರೈತರು ಹೇಳಿದ್ದಾರೆ. ಕಳೆದ ವರ್ಷ ಏಷ್ಯಾದಲ್ಲೇ ಅತೀ ದೊಡ್ಡ ಮಾರುಕಟ್ಟೆಯಾದ ಹಾವೇರಿ ಜಿಲ್ಲೆಯ ಬ್ಯಾಡಗಿ ಬೃಹತ್ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಇಳಿಕೆ ಮಾಡಿದ್ದಕ್ಕೆ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ವಾಹನಗಳು ಸುಟ್ಟು ಕರಕಲಾಗಿದ್ದವು.
ಈ ವರ್ಷವು ಒಣ ಮೆಣಸಿನಕಾಯಿ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಹುಬ್ಬಳ್ಳಿ ಎಪಿಎಂಸಿ ವರ್ತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಕಾಬಿಟ್ಟಿ ದರ ನಿಗದಿ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು ನಡು ರಸ್ತೆಯಲ್ಲೇ ಮೆಣಸಿನಕಾಯಿ ಸುರಿದಿದ್ದಾರೆ. ಸರ್ಕಾರ, ವರ್ತಕರ ವಿರುದ್ಧ ಕಿಡಿ ಕಾರಿದ್ದಾರೆ.

ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಒಣ ಮೆಣಸಿನಕಾಯಿ ಮೇಳ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ, ವರ್ತಕರು ಮೆಣಸಿನಕಾಯಿಗೆ ಬೇಕಾಬಿಟ್ಟಿ ದರ ನಿಗದಿ ಮಾಡಿದ್ದನ್ನು ಸಹಿಸದೇ ನೆಲದ ಮೇಲೆ ಮೆಣಸಿನಕಾಯಿ ಸುರಿದು ಪ್ರತಿಭಟನೆ ಮಾಡಿದ್ದಾರೆ.
ಒಂದು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿಗೆ ಕೇವಲ 700 ದರ ನಿಗದಿ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ರೈತರು. ಬೇಕಿದ್ದರೆ ಬೆಂಕಿ ಹಚ್ಚಿ ಸುಡುತ್ತೇವೆ. ಆದ್ರೆ ಕಡಿಮೆ ದರಕ್ಕೆ ಮಾರಾಟ ಮಾಡಲ್ಲ ಎಂದು ಮೆಣಸಿನಕಾಯಿ ಕೆಳಗೆ ಸುರಿದಿದ್ದಾರೆ. ವರ್ತಕರ ಬೆಲೆ ಇಳಿಕೆ ನಿರ್ಧಾರವನ್ನು ರೈತರು ಖಂಡಿಸಿದ್ದಾರೆ. ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿದ್ದಾರೆ.
ರೈತರು ಉತ್ತಮ ಬೆಲೆ ಬರದೇ, ಬೆಳೆ ಬಂದಾಗ ಬೆಲೆ ಸಿಗದೇ ದುಬಾರಿ ಕಾಲದಲ್ಲಿ ಲಾಭ ಇಲ್ಲದೇ ತತ್ತರಿಸಿದ್ದಾರೆ. ಕೈಗೆ ಬಂದ ಬೆಳೆಗೆ ಇಷ್ಟು ಕಡಿಮೆ ಬೆಲೆ ನಿಗದಿ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ರೈತರನ್ನು ಶೋಷಿಸಲಾಗುತ್ತಿದೆ. ಬೇಕಾಬಿಟ್ಟಿ ದರ ಹಾಕುತ್ತಿರೋ ವರ್ತಕರ ಮೇಲೆ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯ ಮಾಡಿದ್ದಾರೆ.
ಎಪಿಎಂಸಿಯಲ್ಲಿ ರೈತರ ಪ್ರತಿಭಟನೆ ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿತು. ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದ ನಂತರ ಪರಿಸ್ಥಿತಿ ತಿಳಿಗೊಳಿಸಲಾಯಿತು. ಸೂಕ್ತ ಬೆಲೆ ಕೊಡುವುದಾಗಿ ವರ್ತಕರಿಂದ ಆಶ್ವಾಸನೆ ಕೊಡಿಸಿದ ಬಳಿಕವೇ ರೈತರ ಗೊಂದಲಗಳು ಕಡಿಮೆ ಆಯಿತು.
ಬೆಲೆ ಇಳಿಕೆ: ಬ್ಯಾಡಗಿ ಎಪಿಎಂಸಿಯಲ್ಲಿ ಗಲಾಟೆ
ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧವಾದ ಮಾರುಕಟ್ಟೆಯಾಗಿರುವ ಈ ಬ್ಯಾಡಗಿ ಮೆಣಸಿಕಾಯಿ ಎಪಿಎಂಸಿಯಲ್ಲಿ ಕಳೆದ ವರ್ಷ ಮಾರ್ಚ್ 11ರಂದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮಾರುಕಟ್ಟೆಗೆ ಕೆಂಪು ಒಣಮೆಣಸಿನಕಾಯಿ ಆವಕವಾಗುತ್ತಿದ್ದಂತೆ ರಾಜ್ಯದ ರೈತರು ತಂದಿದ್ದ ಮೆಣಸಿನಕಾಯಿ ದರವನ್ನು ದಿಢೀರ್ ಇಳಿಕೆ ಮಾಡಲಾಯಿತು. ಆಗ ರೈತರು, ವರ್ತಕರು ಮಧ್ಯ ಮಾತಿಗೆ ಮಾತು ಬೆಳೆದು, ರೈತರು ವರ್ತಕರ ಕಚೇರಿಗೆ ದಾಳಿ ಮಾಡಿದ್ದರು. ಮೇಜು, ಗ್ಲಾಜು, ಬಾಗಿಲು ಒಡೆದು ಗಲಾಟೆ ಮಾಡಿದ್ದರು. ಕಾರು, ಬೈಕ್‌ಗಳು ಬೆಂಕಿಗೆ ಹೊತ್ತಿ ಉರಿದವು. ಈ ಘಟನೆಯಿಂದ ರಾಜ್ಯದ ಜನರು ಬ್ಯಾಡಗಿಯತ್ತ ನೋಡುವಂತಾಯಿತು..












Click it and Unblock the Notifications