ಪಡಿತರ ಕೂಪನ್ ಗೊಂದಲ: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 10: ಪಡಿತರ ಕೂಪನ್ ವಿತರಣೆ ವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಆಹಾರ ಇಲಾಖೆ ಕಚೇರಿ ಎದುರು ಬುಧವಾರ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪಡಿತರ ವಿತರಣೆಯಲ್ಲಿ ಅಕ್ರಮ ತಡೆಗಟ್ಟಲು ಸರಕಾರ ಕೂಪನ್ ವ್ಯವಸ್ಠೆ ತಂದಿದೆ. ಈ ತಿಂಗಳ ಅಂತ್ಯದೊಳಗೆ ಕೂಪನ್ ಪಡೆದುಕೊಳ್ಳದಿದ್ದರೆ ಪಡಿತರ ಧಾನ್ಯ ವಿತರಣೆ ನಿಲ್ಲಿಸಲಾಗುವುದು ಎಂದು ಸರಕಾರ ಹೇಳಿದೆ. ಹೀಗಾಗಿ ಸಾವಿರಾರು ಬಡ ಕುಟುಂಬದವರು ಪಡಿತರ ಕೂಪನ್ ಪಡೆಯಲು ತಾಸುಗಟ್ಟಲೆ ಪಾಳಿ ಹಚ್ಚಬೇಕಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.['ಕೂಪನ್ ಭಾಗ್ಯಕ್ಕಾಗಿ ಅಲೆದಾಡಿ ಅಲೆದಾಡಿ ಸಾಕಾಗೇತಿ'!]

ಇದಕ್ಕೂ ಮೊದಲು ನಗರದ ಗ್ಲಾಸ್ ಹೌಸ್ ನಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಆಹಾರ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.

Ration card coupon irregulariy: JDS protest, Hubballi

ರೇಷನ್ ಪಡೆಯಲು ಸರಕಾರವು ಕೂಪನ್ ಕಡ್ಡಾಯ ಮಾಡಿರುವುದರಿಂದ ಕೂಲಿಗೂ ಹೋಗದೆ ಕಾದು ನಿಲ್ಲಬೇಕಾಗಿದೆ ಎಂದು ದೂರಿದ ಪ್ರತಿಭಟನಾಕಾರರು, ಕೂಪನ್ ಇಲ್ಲದಿದ್ದರೆ ರೇಷನ್ ಕಾರ್ಡ್ ರದ್ದು ಮಾಡಲಾಗುವುದು ಎಂದು ತಿಳಿಸಲಾಗಿದೆ ಎಂದು ದೂರಿದರು.

ಪಡಿತರ ಅಂಗಡಿಯಲ್ಲಿ ಕೂಪನ್ ಕೇಳುತ್ತಾರೆ. ಕೂಪನ್ ಪಡೆಯಲು ಬಂದರೆ ಅಧಿಕಾರಿಗಳು 11 ಗಂಟೆಗೆ ಬರ್ತಾರೆ, 1ಕ್ಕೆ ಊಟಕ್ಕೆ ಹೋಗ್ತಾರೆ. ಮತ್ತೆ 3 ಗಂಟೆಗೆ ಬಂದು 4.30 ಕ್ಕೆ ಹೊರಟು ಹೋಗುತ್ತಾರೆ. ನಮ್ಮ ಅಹವಾಲು ಕೇಳುವವರಾರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೆಲವರು ಕೂಪನ್ ಗಾಗಿ ರಾತ್ರಿಯೇ ಪಾಳಿಯಲ್ಲಿ ಬಂದು ನಿಲ್ಲುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನ ನಿತ್ಯ ಪರದಾಡುವಂತಾಗಿದೆ ಎಂದರು.

ಕಚೇರಿಗೆ ದಾಳಿ:

ಆಹಾರ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಲವರು ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಕೂಡಲೇ ಉಪನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂದು, ಪ್ರತಿಭಟನಾಕಾರರನ್ನು ಚದುರಿಸಿದರು.

ಸರಕಾರ ಕೂಪನ್ ಉಚಿತವಾಗಿ ವಿತರಿಸುತ್ತಿದೆ. ಆದರೆ ಕೆಲ ರೇಷನ್ ಅಂಗಡಿಗಳಲ್ಲಿ ಹಣ ತೆಗೆದುಕೊಳ್ಳಲಾಗುತ್ತಿದೆ ಎಂಬ ದೂರಿಗೆ ಆಹಾರ ಇಲಾಖೆಯ ಅಧಿಕಾರಿ ಸದಾಶಿವ ಮರ್ಜಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಅಲ್ತಾಫ್ ಕಿತ್ತೂರ, ಫೇಮಿದಾ ಕಿಲ್ಲೇದಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸೆಪ್ಟಂಬರ್‌ನಿಂದ ಜಿಲ್ಲೆಗಳಲ್ಲಿ ಪಡಿತರ ಕೂಪನ್‌ ವಿತರಣೆ:
ಬೆಂಗಳೂರು: ಸೆಪ್ಟಂಬರ್‌ನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಡಿತರ ವಿತರಣೆಗೆ ಕೂಪನ್‌ ವ್ಯವಸ್ಥೆ ಜಾರಿ ಆಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ.

ನಗರಪಾಲಿಕೆ, ನಗರಸಭೆ ಅಥವಾ ಪುರಸಭೆ ವ್ಯಾಪ್ತಿಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ಪಡಿತರ ಕಾರ್ಡುದಾರರಿಗೆ ಕೂಪನ್‌ಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS party workers protest against Ration card coupon irregularities in Hubballi.
Please Wait while comments are loading...