ಟಿಕೆಟ್ ಕೊಡಿಸುವುದಾಗಿ ವಂಚನೆ: ಪ್ರಲ್ಹಾದ ಜೋಶಿ ಸಹೋದರನ ಬಂಧನ!
ಹುಬ್ಬಳ್ಳಿ ಅಕ್ಟೋಬರ್ 19: ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ ಅವರ ಮೇಲೆ ಸುನೀತಾ ಚವ್ಹಾನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಗೋಪಾಲ ಜೋಶಿ ಅವರನ್ನು ಇಂದು ಬಂಧಿಸಲಾಗಿದೆ.
ಬಿಜೆಪಿ ಮಾಜಿ ಶಾಸಕ ದೇವಾನಂದ್ ಸಿಂಗ್ ಚವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್ ಅವರ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಪ್ರಲ್ಹಾದ್ ಜೋಶಿ ಅವರ ಅಣ್ಣ ಗೋಪಾಲ ಜೋಶಿ ಅವರನ್ನು ಹುಡುಕಲು ಆರಂಭಿಸಿದ್ದರು. ಕೊನೆಯಲ್ಲಿ ಅವರನ್ನು ಕೊಲ್ಲಾಪುರದಲ್ಲಿ ಹಾಗೂ ಗೋಪಾಲ ಅವರ ಪುತ್ರ ಅಜಯ್ ಜೋಶಿ ಅವರನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಅಲ್ಲದೆ ಗೋಪಾಲ್ ಜೋಶಿ ಅವರನ್ನು ಹುಬ್ಬಳ್ಳಿಯ ಅವರ ನಿವಾಸಕ್ಕೆ ಕರೆದೊಯ್ದು ಸ್ಥಳಮಹಜರು ಮಾಡಲಾಗಿದೆ.

ಗೋಪಾಲ ಜೋಶಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ದೂರುದಾರೆ ಸುನೀತಾ ಚವ್ಹಾನ್ ಸುದ್ದಿಗಾರರೊಂದಿಗೆ ಮಾತನಾಡಿ, 'ನಮ್ಮ ಪಕ್ಷದಿಂದ ಟಿಕೆಟ್ ಸಿಗುವ ಸಾಧ್ಯತೆ ಇತ್ತು. ಆದರೆ ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇನೆ ಅಂದ್ರು, ಇದರಿಂದ ಸಾಕಷ್ಟು ಮೋಸ ನನಗೆ ಮಾಡಿದ್ದಾರೆ ಎಂದು ಗೋಪಾಲ ಜೋಶಿ ವಿರುದ್ಧ ಸುನೀತಾ ಆರೋಪಿಸಿದ್ದಾರೆ. ಟಿಕೆಟ್ ಕೊಡಿಸೋದಾಗಿ 2 ಕೋಟಿ ಬೇಡಿಕೆ ಇಟ್ಟು, 25 ಲಕ್ಷ ಹಣ ಪಡೆದಿದ್ರು. ಕೊನೆಗೆ ಟಿಕೆಟ್ ಕೊಡಿಸಲಿಲ್ಲ ಕೊಟ್ಟ ಹಣ ಕೂಡ ವಾಪಸ್ ಕೊಡಲಿಲ್ಲ' ಎಂದು ಸುನೀತಾ ದೂರಿದ್ದಾರೆ.
ಹೀಗಾಗಿ ನಾವು ಅನಿವಾರ್ಯವಾಗಿ ದೂರು ಕೊಟ್ಟಿದ್ದೇವೆ. ಆದರೆ ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಹೈಕಮಾಂಡ್ ಹೆಸರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇಂದ್ರ ಸಚಿವರ ಪಾತ್ರ ಇಲ್ಲಾ. ಗೋಪಾಲ ಜೋಶಿ ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ. ನಾನು ನೇರವಾಗಿ ಗೋಪಾಲ ಜೋಶಿ ಅವರಿಗೆ ದುಡ್ಡು ಕೊಟ್ಟಿದ್ದೇನೆ ಎಂದಿದ್ದಾರೆ.
ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸರು ಗೋಪಾಲ್ ಜೋಶಿ, ವಿಜಯಲಕ್ಷ್ಮೀ ಹಾಗೂ ಅಜಯ್ ಜೋಶಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಗೋಪಾಲ್ ಜೋಶಿ ತಲೆಮರೆಸಿಕೊಂಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಗೋಪಾಲ್ ಜೋಶಿ ಕೊಲ್ಲಾಪುರದಲ್ಲಿ ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿದ್ದಾರೆ.












Click it and Unblock the Notifications