Memu Train: ರಾಜ್ಯದ ಈ ಮಾರ್ಗದಲ್ಲಿ 10 ಹೊಸ ಮೆಮು ರೈಲು..
Memu Train: ರಾಜ್ಯದಲ್ಲಿ ರೈಲ್ವೆ ವಿಭಾಗದಲ್ಲಿ ದೊಡ್ಡ ಮಟ್ಟದ ಕ್ರಾಂತಿಯೇ ಆಗುತ್ತಿದೆ. ಹಾಗೆಯೇ ಇದೀಗ ಈ ಮಾರ್ಗದಲ್ಲಿ 10 ಹೊಸ ಮೆಮು ರೈಲುಗಳ ಸೇವೆ ಆರಂಭಿಸುವಂತೆ ಮನವಿ ಸಲ್ಲಿಸಲಾಗಿದೆ. ಹಾಗಾದ್ರೆ ಯಾವ ಮಾರ್ಗದಲ್ಲಿ ಹಾಗೂ ಇದರಿಂದ ಯಾವೆಲ್ಲಾ ಪ್ರಯೋಜನೆಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹುಬ್ಬಳ್ಳಿ-ಧಾರವಾಡ ಅಕ್ಕಪಕ್ಕದ ಪಟ್ಟಣಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ 10 ಹೊಸ ಮೆಮು ರೈಲುಗಳ ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಅವರು, ಪಟ್ಟಣ ಹಾಗೂ ಗ್ರಾಮಗಳಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡುವವರಿಗಾಗಿ 10 ಹೊಸ ಮೆಮು ರೈಲುಗಳ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು. ಹುಬ್ಬಳ್ಳಿ ಉತ್ತರ ಕರ್ನಾಟಕದ ಪ್ರಮುಖ ನಗರವಾಗಿದೆ. ಇಲ್ಲಿನ ಅಕ್ಕಪಕ್ಕದ ಪಟ್ಟಣ, ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ಲಕ್ಷಾಂತರ ಜನರು ಸಾರಿಗೆಗಳಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಆದ್ದರಿಂದ ಇಲ್ಲಿ ಹೊಸ ಮೆಮು ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಹುಬ್ಬಳ್ಳಿ ನಗರಕ್ಕೆ ಶಿಕ್ಷಣ, ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗೆಂದು ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಲಿರುತ್ತಾರೆ. ಇದರಿಂದ ಪ್ರತಿನಿತ್ಯ ರೈಲುಗಳು ಭರ್ತಿಯಾಗಿಬಿಡುತ್ತವೆ. ಆದ್ದರಿಂದ ಜನರಿಗೆ ಮೆಮು ರೈಲುಗಳ ಅಗತ್ಯವಿದೆ. ಈ ಭಾಗದಲ್ಲಿ ರಸ್ತೆ ಸಾರಿಗೆಗಿಂತ ರೈಲುಗಳನ್ನು ಹೆಚ್ಚಾಗು ಬಳಸುತ್ತಾರೆ. ಕೋವಿಡ್ ವೇಳೆ ಸ್ಥಗಿತಗೊಳಿಸಿದ್ದ ಅನೇಕ ಪ್ಯಾಸೆಂಜರ್ ರೈಲು ಸಂಚಾರ ಕೂಡ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದರು.
ಬೆಂಗಳೂರು ರೈಲು ನಿಲ್ದಾಣ ಬಿಟ್ಟರೆ ಹುಬ್ಬಳ್ಳಿಯೇ ಅತ್ಯಂತ ಜನನಿಬಿಡ ರೈಲು ನಿಲ್ದಾಣ ಆಗಿದ್ದು, ಸಾವಿರಾರು ಸಂಖ್ಯೆಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಹೊಂದಿರುವ ಹುಬ್ಬಳ್ಳಿ ನಿಲ್ದಾಣ ಭಾರತೀಯ ರೈಲ್ವೆಯಲ್ಲಿ ಮಹತ್ತರ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿವರ್ತಿಸುವುದು ಅತ್ಯಗತ್ಯ ಆಗಿದೆ ಎಂದು ಅಶ್ವಿನಿ ವೈಷ್ಣವ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಜೊತೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಕೂಡ ಮಹತ್ವದ ಚರ್ಚೆ ನಡೆಸಿದರು. ಇದೇ ವೇಳೆ ನಗರದ ಗದಗ ರಸ್ತೆ ಮೇಲಿರುವ ಡಬಲ್ ಲೈನ್ ರೈಲ್ವೆ ಬ್ರಿಡ್ಜ್ ಅನ್ನು 4 ಲೈನ್‌ಗೆ ವಿಸ್ತರಣೆ ಮಾಡುವ ಸಲುವಾಗಿ ಮತ್ತೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದ ರೈಲ್ವೆ ಪ್ರತಿಯೊಂದು ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ಒಟ್ಟಿನಲ್ಲಿ ವಿ.ಸೋಮಣ್ಣ ಅವರು ರೈಲ್ವೆ ಸಚಿವರಾದಾಗಿನಿಂದ ರಾಜ್ಯಕ್ಕೆ ರೈಲ್ವೆ ಯೋಜನೆಗಳನ್ನು ತರುತ್ತಲೇ ಇದ್ದಾರೆ. ಈ ಮೂಲಕ ರೈಲ್ವೆ ಜಾಲವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.












Click it and Unblock the Notifications