'ಹರ್ ಘರ್ ತಿರಂಗಾ' ಅಭಿಯಾನ ಯಶಸ್ವಿಗೊಳಿಸಲು ಪ್ರಲ್ಹಾದ್ ಜೋಶಿ ಕರೆ
ಹುಬ್ಬಳ್ಳಿ, ಜು.30: 75ನೇ ವರ್ಷದ ಸ್ವಾತಂತ್ರ್ಯಮಹೋತ್ಸವದ ಹಿನ್ನೆಲೆ ಕೇಂದ್ರ ಸರ್ಕಾರ ಹಮ್ಮಿಕೊಂಡ 'ಹರ್ ಘರ್ ತಿರಂಗಾ' ಅಭಿಯಾನ'ದಡಿ ಭಾರತದ ಪ್ರತಿ ಮನೆ ಮನೆಗಳಲ್ಲೂ ರಾಷ್ಟ್ರಧ್ವಜ ಹಾರಬೇಕು. ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕರೆ ಕೊಟ್ಟರು.
ಶನಿವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಸರಣಿ ಸಭೆಗಳನ್ನು ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಆಜಾದಿ ಕ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಜನರು ಅಭಿಯಾನದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸಬೇಕು ಎಂದು ಅವರು ಮನವಿ ಮಾಡಿದರು.
75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಸಂದರ್ಭದಲ್ಲಿರುವ ಭಾರತಕ್ಕೆ ಆಗಸ್ಟ್ 15 ಕೇವಲ ಆಚರಣೆಯಲ್ಲ. ಅದೊಂದು ಐತಿಹಾಸಿಕ ಸಂಭ್ರಮ ಸಮಯ ಆಗಬೇಕು. ಮೊದಲಿನಂತೆ ಈಗ ಧ್ವಜವನ್ನು ಬೆಳಗ್ಗೆ ಹಾರಿಸಿ ಸಂಜೆ ತೆಗೆಯಬೇಕು ಎಂಬ ನಿಯಮ ಇಲ್ಲ. ಫ್ಲಾಗ್ ಕೋಡ್ ಬದಲಾಗಿದ್ದರಿಂದ ಎಲ್ಲರೂ, ದಿನಪೂರ್ತಿ ಧ್ವಜ ಹಾರಿಸಿ ಸಂಭ್ರಮಿಸಬಹುದು. ಹರ್ ಘರ್ ತಿರಂಗಾ ಅಭಿಯಾನವು ಧಾರವಾಡ ಜಿಲ್ಲೆಯಲ್ಲಿ ಕೂಡ ವಿಶಿಷ್ಟ ರೀತಿಯಲ್ಲಿ ಆಚರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಮೃತ ಮಹೋತ್ಸವಕ್ಕೆ 75 ಅಮೃತ ಸರೋವರ
ಧಾರವಾಡ ಜಿಲ್ಲೆಯಲ್ಲಿ ನಿರ್ಮಾಣ ಮಾಡುತ್ತಿರುವ 75 ಕೆರೆಗಳ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಸಿದರು. ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನದ ಅಡಿಯಲ್ಲಿ 75 ಕೆರೆಗಳ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ 15 ಕೆರೆಗಳ ಅಭಿವೃದ್ಧಿ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದೆ. ಅವುಗಳು ಸ್ವಾತಂತ್ರ್ಯೋತ್ಸವ ದಿನಾಚರಣೆಯಂದೇ ಲೋಕಾರ್ಪಣೆ ಮಾಡಲಾಗುವುದು ಸರ್ಕಾರ ಉದ್ದೇಶಿಸಿದೆ ಎಂದು ವಿವರಿಸಿದರು.

ಕಾಮಗಾರಿಯಿಂದ ತೊಂದರೆ ಮಾಡದಂತೆ ಸೂಚನೆ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಕುರಿತು ಚರ್ಚೆ ನಡೆಸಿದ ಪ್ರಲ್ಹಾದ್ ಜೋಶಿ, ಕಾಮಗಾರಿಯ ವೇಳೆ ಇಲ್ಲವೇ ಕಾಮಗಾರಿಯ ನಂತರ ವಾಹನ ಸಂಚಾರ ದಟ್ಟಣೆ ಸಮಸ್ಯೆ ಅಥವಾ ಯಾವುದೇ ರೀತಿಯ ಸಮಸ್ಯೆಗಳು ಸಾರ್ವಜನಿಕರಿಗೆ ಎದರಾಗದಂತೆ ಕಾಮಗಾರಿ ನಡೆಸಲು ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

2.86 ಕೋಟಿ ಮನೆಗೆ ವಿದ್ಯುತ್ ಸೌಲಭ್ಯ
ಹುಬ್ಬಳ್ಳಿಯ "ಉಜ್ವಲ ಭಾರತ - ಉಜ್ವಲ ಭವಿಷ್ಯ" ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಲ್ಹಾದ್ ಜೋಶಿ, ವಿದ್ಯುತ್ ಸಂಪರ್ಕ ವಂಚಿತ ಸಾವಿರಾರು ಹಳ್ಳಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿದ್ಯುತ್ ಕಲ್ಪಿಸಿರುವ ಕುರಿತು ಸ್ಮರಿಸಿದರು. 2014 ರಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಕೇವಲ 18 ತಿಂಗಳಲ್ಲಿ ವಿದ್ಯುತ್ ಸೌಭಾಗ್ಯ ಯೋಜನೆ ಅಡಿಯಲ್ಲಿ 2.86 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಇದು ವಿಶ್ವದ ಅತ್ಯಂತ ದೊಡ್ಡ ವಿದ್ಯುದೀಕರಣ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.

ದೇಶ ಆಳಿದ ಕಾಂಗ್ರೆಸ್ ವಿದ್ಯುತ್ ಕೊಡಲಾಗಲಿಲ್ಲ
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರು ಬಹುಪಾಲು ಆಡಳಿತ ನಡೆಸಿದ ಕಾಂಗ್ರೆಸ್‌ಗೆ ದೇಶದ ಸಾವಿರಾರು ಹಳ್ಳಿಗಳಿಗೆ ಬೆಳಕು ಕೊಡಲು ಸಾಧ್ಯವಾಗಲಿಲ್ಲ ಎಂಬುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಲೇವಡಿ ಮಾಡಿದರು. ಆದರೆ ದೇಶದಲ್ಲಿ ಬಿಜೆಪಿ ಸರ್ಕಾರ ಬಂದಾಗಲೆಲ್ಲ ವಿದ್ಯುತ್ ವಂಚಿತ ಪ್ರತಿ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವದ ಕಾರ್ಯ ನೆರವೇರಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಯಸಾಧನೆ ಎಂದು ಜೋಶಿ ಸಂತಸ ಹಂಚಿಕೊಂಡರು.












Click it and Unblock the Notifications