Prajwal Revanna: ಪ್ರಜ್ವಲ್ ಕಾನೂನಾತ್ಮಕವಾಗಿ ಶರಣು: ಎಲ್ಲ ಆಯಾಮಗಳ ತನಿಖೆಗೆ ಮಾಜಿ ಸಿಎಂ ಒತ್ತಾಯ
ಹುಬ್ಬಳ್ಳಿ, ಮೇ 31: ಹಾಸನ ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ನೆನ್ನೆ ತಡರಾತ್ರಿ ಸ್ವದೇಶಕ್ಕೆ ಮರಳಿದ್ದಾರೆ. ಈ ಪ್ರಕರಣ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ SIT ತನಿಖಾಧಿಖಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕು ಹಾಗೂ ಸಂತ್ರಸ್ಥರಿಗೆ ನ್ಯಾಯ ದೊರೆಯಬೇಕು. ಪೆನ್ ಡ್ರೈವ್ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ ಕಾನೂನಾತ್ಮಕವಾಗಿ ಶರಣಾಗಿದ್ದಾನೆ. ಎಸ್ ಐಟಿಯವರು ತನಿಖೆಯನ್ನು ಕಟುಬದ್ಧವಾಗಿ ಮಾಡಬೇಕು ಎನ್ನುವುದು ಇಡೀ ಕರ್ನಾಟಕ ಜನರ ಒತ್ತಾಯ. ಅಲ್ಲದೇ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಅವರು ಪುನರುಚ್ಚರಿಸಿದರು.

ಪ್ರಕರಣದ ಘಟನೆಗಳು ಯಾವ ರೀತಿ ಪ್ರಚಲಿತಕ್ಕೆ ಬಂತು, ಯಾರು ಪ್ರಚಾರ ಮಾಡಿದರು. ಪೆನ್ ಡ್ರೈವ್ ಯಾರ ಹತ್ತಿರ ಇತ್ತು? ಅವರು ಯಾಕೆ ಬಂಧನ ಆದರೆ ಎಂಬೆಲ್ಲ ಹಲವು ಆಯಾಮಗಳನ್ನು ಪಡೆದಿತ್ತು. ಖಂಡಿತವಾಗಿಯೂ ಇದರಲ್ಲಿ ರಾಜಕಾರಣವು ಬೆರತ್ತಿದೆ. ಕಾನೂನು ಪ್ರಕಾರ ಇಂತಹದ್ದನ್ನು ಪ್ರಚಾರ ಮಾಡುವುದು ಕಾನೂನಿಗೆ ವಿರುದ್ದವಾದದ್ದು. ಆ ನಿಟ್ಟಿನಲ್ಲಿ ಎಸ್ ಐಟಿ ಮುಂದುವರೆದು ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಬ್ಯಾಂಕ್ ಪಾತ್ರವಿದೆ
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ ಆತ್ಮಹತ್ಯೆ ಪ್ರಕರಣದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅಧಿಕಾರ ಚಂದ್ರಶೇಖರ ಪ್ರಕರಣವು ಸಿಬಿಐಗೆ ವಹಿಸಲು ಯೋಗ್ಯವಾಗಿದೆ. ಇದರಲ್ಲಿ ಬ್ಯಾಂಕ್‌ನ ಪಾತ್ರ ಸಹ ಇದೆ ಎಂದು ಅವರು ಆರೋಪಿಸಿದರು.
ಬ್ಯಾಂಕ್ ನ ನಿಯಮ ಪ್ರಕಾರ 10 ಕೋಟಿಗಿಂತ ಜಾಸ್ತಿ ವಹಿವಾಟುಗಳ ಕುರಿತಾಗಿ ಸಿಬಿಐ ತನಿಖೆ ನಡೆಯಬೇಕು. ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಇಡೀ ಸರ್ಕಾರದ ನೈತಿಕತೆ ಪ್ರಶ್ನೆ ಅಡಗಿದೆ. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಯಾವ ನೈತಿಕತೆ ಬಗ್ಗೆ ಕಾಂಗ್ರೆಸ್‌ನವರು ಮಾತನಾಡಿದ್ದರು ಎಂದು ಪ್ರಶ್ನಿಸಿದರು.

ಅದೇ ನಾಯಕರು ಇವತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಿದ್ದಾರೆ. ಹಾಗಾಗಿ ಅವರ ನೈತಿಕತೆ ಸರ್ಕಾರದ ನೈತಿಕತೆಯ ಪ್ರಶ್ನೆ ಇದೆ. ಪ್ರಮಾಣಿಕತೆ ಉಳಿಸಿಕೊಳ್ಳುತ್ತಾರೋ? ಇಲ್ಲಾ ಮಂತ್ರಿಯನ್ನು ಉಳಿಸಿಕೊಳ್ಳುತ್ತಾರೋ? ಅನ್ನುವ ಪ್ರಶ್ನೆ ಅವರ ಮೇಲೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ಹರಿಹಾಯ್ದರು.
ಯಜ್ಞ, ಯಾಗದ ಬಗ್ಗೆ ಅವರಿಗೇ ಗೊತ್ತು: ಬೊಮ್ಮಾಯಿ
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾಗ ಯಜ್ಞ ಅವರಿಗೇ ಗೊತ್ತು ಎಂದು ಕುಟುಕಿದರು.
ಭ್ರಷ್ಟಾಚಾರ ಪ್ರೋತ್ಸಾಹಿಸುವ, ಭ್ರಷ್ಟಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದೆ. ಇಡೀ ಸಚಿವ ಸಂಪುಟವೇ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಸಚಿವರ ರಾಜೀನಾಮೆ ಕೇಳುವ ನೈತಿಕತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದುಕೊಂಡಿದ್ದಾರೆ ಎಂದು ಗುಡುಗಿದರು.












Click it and Unblock the Notifications