ಷರತ್ತುಗಳ ಮೇಲೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ
ಹುಬ್ಬಳ್ಳಿ, ಸೆಪ್ಟೆಂಬರ್ 16: ನಗರದ ರಾಣಿ ಚೆನ್ನಮ್ಮ ( ಈದ್ಗಾ ) ಮೈದಾನದಲ್ಲಿ ಮೂರು ದಿನಗಳವರೆಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಆಗಸ್ಟ್ 31ರಂದು ನಡೆದ ಸಾಮಾನ್ಯ ಸಭೆ ಠರಾವಿನ ಆದೇಶ ಪ್ರಕಾರ ಈಗ ಮೂರು ದಿನಗಳವರೆಗೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಕಾನೂನು ಸುವ್ಯವಸ್ಥೆಗಾಗಿ ನಾವು 18 ಷರತ್ತುಗಳನ್ನು ಹಾಕಿದ್ದೇವೆ ಎಂದು ತಿಳಿಸಿದ್ದಾರೆ.

ಗಣೇಶೋತ್ಸವ ಸಲುವಾಗಿ ಪೆಂಡಾಲ್ ಅಳತೆ ಸೇರಿದಂತೆ ಹಲವು ಷರತ್ತುಗಳನ್ನು ಹಾಕಲಾಗಿದ್ದು. ಅನ್ಯ ಧರ್ಮದವರಿಗೆ ಧಕ್ಕೆ ಉಂಟು ಮಾಡದಂತೆ ಷರತ್ತುಗಳನ್ನು ಹಾಕಿದ್ದೇವೆ. ಇದರ ಜೊತೆಗೆ ಸೆಕ್ಷನ್ 59 ಪ್ರಕಾರ ನಮಗೆ ಉಚಿತವಾಗಿ ಕೊಡಲು ಸಹ ಅವಕಾಶ ಇದೆ. ಈಗ ನಾವು ಒಂದು ವರ್ಷಕ್ಕೆ ಮಾತ್ರ ಅನುಮತಿ ಕೊಟ್ಟಿದ್ದೇವೆ. ಇದು ಮುಂದಿನ ದಿನಗಳಲ್ಲಿ ಅನ್ವಯ ಆಗಲ್ಲ ಎಂದರು.
ಇನ್ನು ನಮ್ಮ ಮೇಲೆ ಅನುಮತಿ ಕೊಡಬಾರದು ಅಂತ ಯಾರ ಒತ್ತಡವೂ ಇರಲಿಲ್ಲ. ಇದನ್ನು ನಾನು ಸ್ಪಷ್ಟ ಪಡಿಸುತ್ತಿದ್ದೇನೆ. ನಾವು ಅನುಮತಿ ನೀಡಬೇಕು ಎನ್ನುವಷ್ಟರಲ್ಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಾಗಿದ್ದರಿಂದ ಉಚ್ಚ ನ್ಯಾಯಾಲಯದ ನಿರ್ಧಾರಕ್ಕೆ ಕಾಯಬೇಕಿತ್ತು ಪ್ರಮಾಣೀಕೃತ ಪತ್ರ ಸಹ ತಡವಾಗಿ ಸಿಕ್ಕಿತು ನಮಗೆ. ಗುರುವಾರ ಹೈಕೋರ್ಟ್ ವಿಚಾರಣೆ ನಡೆದಿದೆ. ತೀರ್ಪಿನ ಕಾಪಿ ನಮಗೆ ಸಿಗುವುದು ತಡವಾಯ್ತು, ಹೀಗಾಗಿ ಅನುಮತಿ ನೀಡಲು ವಿಳಂಬವಾಗಿದೆ ಎಂದು ಹೇಳಿದರು.

ಇನ್ನು ಸೆಪ್ಟೆಂಬರ್ 19ರಿಂದ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದೇವೆ ಅದಕ್ಕಿಂತ ಮುಂಚೆ ಯಾವುದೇ ಪೂಜೆಗೂ ಅನುಮತಿ ಇಲ್ಲ. ಯಾವುದೇ ರೀತಿ ಒತ್ತಡ ಇಲ್ಲಾ, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಸೇರಿ ಕಾನೂನು ಸುವ್ಯವಸ್ಥೆಗಾಗಿ ಷರತ್ತು ಹಾಕಿದ್ದೇವೆ. ಷರತ್ತಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮುಹೂರ್ತದ ಆದರಲ್ಲಿ ಸಮಯ ನೀಡಲಾಗಿದೆ ಎಂದು ತಿಳಿಸಿದರು.
ಷರತ್ತುಗಳಿಗೆ ಒಪ್ಪದ ಸಮಿತಿ
ಈದ್ಗಾ ಮೈದಾನದಲ್ಲಿ ಒಂದಲ್ಲ, ಎರಡಲ್ಲ, ಹುಬ್ಬಳ್ಳಿ ಗಣೇಶೋತ್ಸವ ಆಚರಣೆಗೆ ಬರೋಬ್ಬರಿ 18 ಷರತ್ತುಗಳನ್ನು ವಿಧಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹುಬ್ಬಳ್ಳಿ ಗಣೇಶೋತ್ಸವಕ್ಕೆ ಹೆಚ್ಚು ಷರತ್ತುಗಳನ್ನು ವಿಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಮಾರ್ಪಾಡು ಮಾಡುವಂತೆ ಉತ್ಸವ ಸಮಿತಿ ಒತ್ತಾಯಿಸುತ್ತಿದ್ದು, ಒಂದೊಮ್ಮೆ ಸಡಿಲಿಕೆ ಮಾಡದಿದ್ದಲ್ಲಿ ಹಿರಿಯರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗಜಾನನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಸಂಜೀವ್ ಬಡಸ್ಕರ್ ಹೇಳಿದ್ದಾರೆ.
ಕೇವಲ ಒಂದು ಗಂಟೆಯಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಮೆರವಣಿಗೆ ಮಾಡದೇ ನಿಗದಿತ ಸಮಯಕ್ಕೆ ಪ್ರತಿಷ್ಠಾಪನೆ ಸೇರಿದಂತೆ ಹಲವು ಷರತ್ತುಗಳನ್ನ ವಿಧಿಸಿದ್ದಾರೆ. ಶಾಸ್ತ್ರೋಕ್ತವಾಗಿ ನಾವು ಗಣೇಶ ಪ್ರತಿಷ್ಠಾಪನೆ ಮಾಡಬೇಕಿರುವುದರಿಂದ ಷರತ್ತುಗಳಿಗೆ ನಾವು ಒಪ್ಪಿಕೊಂಡಿಲ್ಲ. ನಾಳೆ ಬೆಳಗ್ಗೆ ಷರತ್ತು ಮಾರ್ಪಾಡು ಮಾಡುವಂತೆ ಪಾಲಿಕೆಗೆ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಒಪ್ಪದಿದ್ದರೆ ಹಿರಿಯರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.












Click it and Unblock the Notifications