Special Bus Service: ದೀಪಾವಳಿಗೆ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ಸೌಲಭ್ಯ
ಹುಬ್ಬಳ್ಳಿ, ಅಕ್ಟೋಬರ್ 21: ಹುಬ್ಬಳ್ಳಿಯಿಂದ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲಮ್ಮದೇವಿ ದೇವಸ್ಥಾನಕ್ಕೆ ಕಳೆದ ವಾರ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಭಕ್ತರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಇದೀಗ ದೀಪಾವಳಿ ವೇಳೆ ಯಲಮ್ಮನ ದೇವಸ್ಥಾನಕ್ಕೆ ತೆರಳು ಭಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಿದೆ.
ಯಲ್ಲಮ್ಮನ ಗುಡ್ಡಕ್ಕೆ ಬಿಡಲಾಗಿದ್ದ ವಿಶೇಷ ಬಸ್‌ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಇದೀಗ ಪ್ರತಿ ಮಂಗಳವಾರ ಮತ್ತು ಶುಕ್ರವಾರವು ದೇವಸ್ಥಾನಕ್ಕೆ ವಿಶೇಷ ಬಸ್ ಕಾರ್ಯಾಚರಣೆ ಮುಂದುವರಿಯಲಿದೆ. ಈ ಸೌಲಭ್ಯವು ದೀಪಾವಳಿಯವರೆಗೆ ಇರಲಿದೆ ಎಂದು ಹುಬ್ಬಳ್ಳಿಯ ವಾಯುವ್ಯ ರಸ್ತೆ ಸಾರಿಗೆ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ಕಳೆದ ವಾರ ಶೀಗಿ ಹುಣ್ಣಿಮೆ ಹಿನ್ನೆಲೆಯಲ್ಲಿ ಇದೇ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಹುಬ್ಬಳ್ಳಿಯ ವಿವಿಧೆಡೆಯಿಂದ ಬಸ್ ಬಿಡುಗಡೆ ಮಾಡಲಾಗಿತ್ತು. ಅಕ್ಟೋಬರ್ 17ರಂದು ಶೀಗಿ ಹುಣ್ಣಿಮೆ ಇತ್ತು. ಹುಣ್ಣಿಗೆ ಗುಡ್ಡಕ್ಕೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ನಂತರ ದೇವಿಯ ವಾರದ ಶುಕ್ರವಾರ ಅಂದು ಸಹ ಹೆಚ್ಚಿರುವ ಕಾರಣ ಅ. 18ರಂದು ಸಹ ಶುಕ್ರವಾರ ಹಾಗೂ ಅ.20ರಂದು ರವಿವಾರ ವಿಶೇಷ್ ಬಸ್ ಬಿಡಲಾಗಿತ್ತು.
ವಿಶೇಷ ಬಸ್ ಸೌಲಭ್ಯ ಸೇವೆ ದೀಪಾವಳಿವರೆಗೆ ವಿಸ್ತರಣೆ
ಈ ಬಸ್‌ಗಳು ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಬಸ್ ಸ್ಟ್ಯಾಂಡ್ ಹಾಗೂ ನವಲಗುಂದ ಬಸ್ ನಿಲ್ದಾಣದಿಂದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದವು. ಇದರಿಂದ ಭಕ್ತರು ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ಸಹಾಯವಾಗಿತ್ತು. ಇದೀಗ ದೀಪಾವಳಿಗೆ ಗುಡ್ಡಕ್ಕೆ ಹೋಗಿ ಬರುವವರ ಸಂಖ್ಯೆ ಹೆಚ್ಚಿರುವ ಕಾರಣ ವಿಶೇಷ ಬಸ್ ಸೌಲಭ್ಯ ಮುಂದುವರೆಸಲು ತೀರ್ಮಾನಿಸಲಾಗಿದೆ.
ಕಳೆದ ವಾರದ ಅಕ್ಟೋಬರ್ 17 ರಿಂದ 20 ರ ತನಕ NWKRTC ಬರೋಬ್ಬರಿ 112 ವಿಶೇಷ ಬಸ್ಸುಗಳನ್ನು ಗುಡ್ಡಕ್ಕೆ ಕಾರ್ಯಾಚರಣೆ ಮಾಡಿತ್ತು. ಈ ವೇಳೆ ಇದಕ್ಕೆ ಭಕ್ತರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಸ್ ಸೇವೆ ವಿಸ್ತರಣೆ ಮಾಡಲಾಗಿದೆ. ಕಳೆದ ವಾರ ಹುಬ್ಬಳ್ಳಿ-ಧಾರವಾಡ, ನವಲಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಬರೋಬ್ಬರಿ ಸುಮಾರು 13,000ಕ್ಕೂ ಹೆಚ್ಚು ಭಕ್ತಾದಿಗಳು ಈ ಬಸ್‌ಗಳಲ್ಲಿ ಸಂಚಾರ ಮಾಡಿದ್ದರು. ಇದರಲ್ಲಿ ಮಹಿಳೆಯ ಸಂಖ್ಯೆ ಅತ್ಯಧಿಕವಾಗಿತ್ತು ಎಂದು ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಈ ವರ್ಷದ ದೀಪಾವಳಿಯು ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ನಡೆಯಲಿದೆ. ಹೀಗಾಗಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ಬಸ್ ಗಳ ವ್ಯವಸ್ಥೆ ಮುಂದುವರೆಸುವಂತೆ ಕೋರಲಾಗಿತ್ತು. ಬೇಡಿಕೆ ಆಧಾರದಲ್ಲಿ ಬಸ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಕೇವಲ ದೀಪಾವಳಿ ಹಬ್ಬದ ಪ್ರಯುಕ್ತ ಮಾತ್ರವಲ್ಲದೇ ನೀವು ಅಕ್ಟೋಬರ್ 22, 25 ಹಾಗೂ 27 ರಂದು ಸಹ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಬಸ್‌ನಲ್ಲಿ ಪ್ರಯಾಣಿಸಬಹುದಾಗಿದೆ. ಪ್ರಯಾಣ, ಟಿಕೆಟ್ ದರದಲ್ಲಿ ವ್ಯತ್ಯಾಸ ಇಲ್ಲ. ಸಮಯ ನೋಡಿಕೊಂಡು ಭಕ್ತರು, ಸಾರ್ವಜನಿಕರು ಬಸ್ ಸಂಚಾರ ಮಾಡಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications