ಚಳಿಗಾಲ ಅಧಿವೇಶನ: ಜನಪ್ರತಿನಿಧಿಗಳಿಗ ಉತ್ತರ ಕರ್ನಾಟಕ ಹೋರಾಟಗಾರರ ಖಡಕ್ ಎಚ್ಚರಿಕೆ
ಹುಬ್ಬಳ್ಳಿ, ಡಿಸೆಂಬರ್ 06: ಬೆಳಗಾವಿಯಲ್ಲಿ ಇದೇ ಡಿಸೆಂಬರ್ 9ರಿಂದ ನಡೆಯುವ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಉತ್ತರ ಕರ್ನಾಟಕದ ಸಮಸ್ಯೆಗಳಾದ ಕಳಸಾ ಬಂಡೂರಿ ಮಹದಾಯಿ ನೀರು, ಮಲಪ್ರಭಾ ಜೋಡನೆ, ಉತ್ತರ ಕರ್ನಾಟಕದಲ್ಲಿ ರೈತ ಆತ್ಮಹತ್ಯೆ, ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ನಿಗದಿತ ಬೆಲೆ ಕೊಡದೇ ಇರುವುದು, ಬಳೆ ಹಾನಿ ಪರಿಹಾರದ ಬಗ್ಗೆ ಚರ್ಚೆ ನಡೆಸಲಿ. ವಿನಃ ಕಾಟಾಚಾರಕ್ಕೆ ಅಧಿವೇಶನ ಬೇಡ.
ಈ ಹಿಂದಿನ ರೀತಿಯ ಚಳಿಗಾಲದ ಅಧಿವೇಶನ ಮಾಡಿದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಅನಿವಾರ್ಯ ಎಂದು ರೈತ ನಾಯಕರು ಹಾಗೂ ಉತ್ತರ ಕರ್ನಾಟಕ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ರೈತರು, ಅನಗತ್ಯವಾಗಿ ಮೈಸೂರು ನಗರಾಭಿವೃದ್ಧಿ ಇಲಾಖೆ, ವಾಲ್ಮೀಕಿ ಹಗರಣ, ವಕ್ಪ್ ಸೇರಿದಂತೆ ಇತರ ಅನವಶ್ಯಕ ವಿಷಯಗಳ ಕುರಿತು ಮಾತನಾಡುವುದು, ಜನರ ಗಮನ ಬೇರೆಡೆ ಸೆಳೆದು, ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದರಿಂದ ಸಾಕಷ್ಟು ಉತ್ತರ ಕರ್ನಾಟಕ ಭಾಗದ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅದರ ಕುರಿತು ಆರೋಗ್ಯಕರವಾದ ಚರ್ಚೆ ಆಗಬೇಕು ಅದನ್ನು ಬಿಟ್ಟು ಕಾಟಾಚಾರಕ್ಕೆ ಅಧಿವೇಶನ ಮಾಡುವುದು ಬೇಡ ಎಂದರು.
ರಾಜ್ಯದ ಹಿರಿಯ ರಾಜಕಾರಣಿ ಉಮೇಶ ಕತ್ತಿ ಜೀವಿತಾವಧಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸರ್ಕಾರಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸುತ್ತಲೇ ಇದ್ದರು. ಈ ಭಾಗದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕು. ಆಗ ಮಾತ್ರ ಪ್ರಾದೇಶಿಕ ಅಸಮಾನತೆ ದೂರ ಮಾಡಲು ಸಾಧ್ಯ ಎಂದು ರೈತರು ಒತ್ತಾಯಿಸಿದರು.

ಈ ಭಾಗವನ್ನು ಅಭಿವೃದ್ಧಿ ಮಾಡದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂದು ಹಲವು ಸಲ ಮಾಧ್ಯಮಗಳ ಎದುರು ಉಮೇಶ ಕತ್ತಿ ಹೇಳಿಕೆ ನೀಡ್ತಿದ್ದರು. ನಂತರ ಅವರ ಕೂಗಿಗೆ ಸಾಕಷ್ಟು ಜನ ಧ್ವನಿ ಸಹ ಕೂಡಿಸಿದ್ದರು. ಈಗ ಅದೇ ಧ್ವನಿ ಮತ್ತೆ ಮರುಳಿಸಿದೆ ಉತ್ತರ ಕರ್ನಾಟಕ ಪ್ರತ್ಯೇಕದ ಕೂಗು ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗಳಾಗಬೇಕು. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಸದಾಶಯದೊಂದಿಗೆ ದಶಕಗಳ ಹಿಂದೆಯೇ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಅಲ್ಲದೇ ಎಲ್ಲ ಸರ್ಕಾರಗಳು ಪ್ರತಿವರ್ಷ ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಲೇ ಬಂದಿವೆ.
ಚಳಿಗಾಲ ಅಧಿವೇಶನದಲ್ಲಿ ಮಾತ್ರ ಬಳಸಲಾಗುವ ಸುವರ್ಣಸೌಧ ವರ್ಷಪೂರ್ತಿಯೂ ಕ್ರಿಯಾಶೀಲವಾಗಿರಬೇಕು ಎಂಬುದು ಈ ಭಾಗದ ಹೋರಾಟಗಾರರ ಪ್ರಮುಖ ಬೇಡಿಕೆ. ಇದಕ್ಕಾಗಿ ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಈ ಭಾಗದ ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಈ ಬೇಡಿಕೆಗೆ ಸ್ಪಂದಿಸುತ್ತಿಲ್ಲ.
ಈ ಬಾರಿಯ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆ ಆಗಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ನಡೆಸುತ್ತೇವೆ. ಕಚೇರಿ ಸ್ಥಳಾಂತರಕ್ಕೆ ಆಗ್ರಹಿಸಿ ಅಧಿವೇಶನದಲ್ಲಿ ಉಗ್ರ ಸ್ವರೂಪದ ಹೋರಾಟ ಅನಿವಾರ್ಯ ಎಂದು ರೈತ ನಾಯಕ ಸಿದ್ದು ತೇಜಿ ತಿಳಿಸಿದ್ದಾರೆ.












Click it and Unblock the Notifications