ಧಾರವಾಡದಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ: ಹಂತಕರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದ ಪ್ರಹ್ಲಾದ್ ಜೋಶಿ
ಧಾರವಾಡ, ಏಪ್ರಿಲ್ 19: ಧಾರವಾಡದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ಮುಖಂಡನನ್ನು ಅಪರಿಚಿತ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ. ಮೃತನನ್ನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೂ ಆಗಿದ್ದ ಪ್ರವೀಣ್ ಕಮ್ಮಾರ್ ಎಂದು ಗುರುತಿಸಲಾಗಿದೆ. ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಧಾರವಾಡ ಜಿಲ್ಲೆಯ ಕೋಟೂರು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ದೇವಸ್ಥಾನದ ಜಾತ್ರೆಯ ವೇಳೆ ಈ ಘಟನೆ ನಡೆದಿದೆ. ಉಡಚಮ್ಮ ದೇವಿ ದೇವಸ್ಥಾನದ ಜಾತ್ರೆಗೆ ಇಬ್ಬರು ವ್ಯಕ್ತಿಗಳು ಕುಡಿದ ಅಮಲಿನಲ್ಲಿ ಬಂದಿದ್ದರು. ಅವರನ್ನು ಕಮ್ಮಾರ್ ಪ್ರಶ್ನಿಸಿದ್ದರು. ಅವರ ನಡುವೆ ವಾಗ್ವಾದ ನಡೆದಿತ್ತು. ನಂತರ, ಆರೋಪಿಗಳು ದೊಡ್ಡ ಗುಂಪಿನೊಂದಿಗೆ ಬಂದು ಚಾಕುವಿನಿಂದ ಇರಿದಿದ್ದಾರೆ. ಬುಧವಾರ ಮುಂಜಾನೆ ಕಮ್ಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸ್ಥಳೀಯ ಜಿಲ್ಲಾ ಪೊಲೀಸರಿಗೆ ಹೆಚ್ಚುವರಿಯಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ನಿಯೋಜಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಬಿಜೆಪಿ ಸಂಸದ ಮತ್ತು ಯುವಮೂರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಕಮ್ಮಾರ್ ಸಾವಿನ ಹಿಂದೆ ರಾಜಕೀಯ ದ್ವೇಷವಿದೆ ಎಂದು ಆರೋಪಿಸಿದ್ದಾರೆ.
'ಬಿಜೆಪಿ ಯುವ ಮೋರ್ಚಾದ ಧಾರವಾಡ ಘಟಕದ ಕಾರ್ಯನಿರ್ವಾಹಕ ಸದಸ್ಯ ಮತ್ತು ಕೊಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀ ಪ್ರವೀಣ್ ಕಮ್ಮಾರ್ ಅವರ ಹತ್ಯೆಯ ಸುದ್ದಿಯನ್ನು ನಾವು ತೀವ್ರ ದುಃಖದಿಂದ ಹಂಚಿಕೊಳ್ಳುತ್ತೇವೆ. ನಿನ್ನೆ ತಡರಾತ್ರಿ ಶಂಕಿತ ರಾಜಕೀಯ ವಿರೋಧಿಗಳು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಂತಕರನ್ನು ತಕ್ಷಣವೇ ಬಂಧಿಸುವಂತೆ ಬಿಜೆಪಿ ಯುವ ಮೋರ್ಚಾ ಒತ್ತಾಯಿಸುತ್ತದೆ ಮತ್ತು ಅವರ ಸದ್ಗತಿಗಾಗಿ ಪ್ರಾರ್ಥಿಸುತ್ತದೆ' ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ.
ಹಂತಕರನ್ನು ಸುಮ್ಮನೇ ಬಿಡುವುದಿಲ್ಲವೆಂದು ಜೋಶಿ
ಈ ವಿಚಾರದ ಕುರಿತು ಟ್ವೀಟ್ ಮಾಡಿರುವ ಪ್ರಹ್ಲಾದ್ ಜೋಶಿ, 'ಕೋಟೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಯುವಮೋರ್ಚಾ ಕಾರ್ಯಕಾರಣಿ ಸದಸ್ಯನಾಗಿ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರವೀಣ್ ಕಮ್ಮಾರ್ ಅವರ ಸಾವು ಮನಸ್ಸಿಗೆ ಆಘಾತ ಉಂಟುಮಾಡಿದೆ' ಎಂದು ಹೇಳಿದ್ದಾರೆ.
'ನಮ್ಮ ಕಾರ್ಯಕರ್ತರ ಸಾವಿಗೆ ಕಾರಣವಾದ ಹಂತಕರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತೃಪ್ತಿ ಪಡುವ ಅತೃಪ್ತ ಆತ್ಮಗಳನ್ನು ಸಮಾಜದ ಮುಂದೆ ಬೆತ್ತಲಾಗಿಸುವ ಕಾಲ ಸನ್ನಿಹಿತವಾಗಿದೆ' ಎಂದು ಜೋಶಿ ತಿಳಿಸಿದ್ದಾರೆ.
'ವಿಷಯ ತಿಳಿದು ಎಸ್ ಡಿ ಎಂ ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದೆ. ಮೃತ ಪ್ರವೀಣನ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಜೋಶಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications