ಮುಂಗಾರು ಹಂಗಾಮಿನ ಬಿತ್ತನೆ: ರೈತರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್!
ಹುಬ್ಬಳ್ಳಿ ಮೇ.21: 2025-26ನೇ ಸಾಲಿನ ಹುಬ್ಬಳ್ಳಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆಗಳಾದ ಸೋಯಾ ಅವರೆ, ಹೆಸರು, ಉದ್ದು, ಶೇಂಗಾ ಹಾಗೂ ಮೆಕ್ಕೆಜೋಳ ಬೆಳೆಗಳ ಬಿತ್ತನೆ ಬೀಜಗಳ ವಿತರಣೆಯನ್ನು ತಾಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳಾದ ಹುಬ್ಬಳ್ಳಿ, ಛಬ್ಬಿ ಹಾಗೂ ಶಿರಗುಪ್ಪಿ ಮೂಲಕ ಹಾಗೂ ಹೆಚ್ಚುವರಿ 5 ಕೇಂದ್ರಗಳಾದ ಪಿ.ಕೆ.ಪಿ.ಎಸ್ ಬಿಡಾಳ, ನೂಲ್ಕಿ, ಕುಸುಗಲ್, ಬ್ಯಾಹಟ್ಟಿ ಹಾಗೂ ಕೋಳಿವಾಡ ಮೂಲಕ ವಿತರಣೆ ಮಾಡಲಾಗುತ್ತಿದೆ.
2025-26 ನೇ ಸಾಲಿನಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ ಪ್ರಮುಖ ಕೃಷಿ ಬೆಳೆಗಳಾದ ಮೆಕ್ಕೆಜೋಳ 7952 ಹೆಕ್ಟೇರ್, ಹೆಸರು 12928 ಹೆಕ್ಟೇರ್, ಶೇಂಗಾ 3379 ಹೆಕ್ಟೇರ್ ಹಾಗೂ ಸೋಯಾ ಅವರೆ 8235 ಹೆಕ್ಟೇರ್ ನಂತೆ ಒಟ್ಟು 42485 ಹೆಕ್ಟೇರ್ ನಷ್ಟು ಬಿತ್ತನೆ ಗುರಿ ನಿಗದಿಯಾಗಿರುತ್ತದೆ. ಅದರಂತೆ ಪ್ರಸ್ತುತ ಪೂರ್ವ ಮುಂಗಾರಿನಲ್ಲಿ 89.5 ಮಿ.ಮಿ ಮಳೆ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದೀಗ 145.4 ಮಿಮಿ ನಷ್ಟು ಮಳೆಯಾಗಿದೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಭೂಮಿ ಸಿದ್ಧತೆಗಳು ಪೂರ್ಣಗೊಂಡಿದ್ದು ರೈತರ ಜಮೀನುಗಳು ಬಿತ್ತನೆ ಮಾಡಲು ಸಜ್ಜಾಗಿವೆ.

ತಾಲ್ಲೂಕಿನಾದ್ಯಾಂತ ಕೃಷಿ ಅಧಿಕಾರಿಗಳು ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳಿಗೆ ಭೇಟಿ ನೀಡಿ ವಿವಿಧ ರಸಗೊಬ್ಬರ ಮಾದರಿಗಳನ್ನು ತೆಗೆದು ಗುಣನಿಯಂತ್ರಣಕ್ಕೆ ಒಳಪಡಿಸಲಾಗಿರುತ್ತದೆ ಹಾಗೂ ಈ ಮಳಿಗೆಗಳಿಗೆ ಇಲಾಖೆ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಸೂಚಿಸಲಾಗಿದೆ. ಯೂರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಗಳಲ್ಲಿ ಸಾರಜನಕ ಹಾಗೂ ರಂಜಕ ಅಂಶಗಳು ಮಾತ್ರ ಲಭ್ಯವಿದೆ.
ರೈತರು ಬಿತ್ತನೆ ಸಮಯದಲ್ಲಿ ಯೂರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಗಳ ಮೇಲೆ ಅವಲಂಬನೆಯಾಗದೆ ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಫೋಟ್ಯಾಶ್ ಅಂಶವಿರುವ ಇತರೆ ಸಂಯುಕ್ತ ರಸಗೊಬ್ಬರಗಳಾದ 10:26:26, 12:32:16, 15:15:15, 19:19:19, 17:17:17, 14:35:14 ಕಾಳು ಬೆಳೆಗಳಾದ ಶೇಂಗಾ ಹಾಗೂ ಸೋಯಾಅವರೆಯಲ್ಲಿ ಎಣ್ಣೆ ಅಂಶ ಹೆಚ್ಚಿಸಲು ಬಿತ್ತನೆ ಸಮಯದಲ್ಲಿ 20:20:0:13 ಸಂಯುಕ್ತ ರಸಗೊಬ್ಬರವನ್ನು ಬಳಸುವಂತೆ ರೈತರಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ23ಕ್ಕೆ ಆಯ್ಕೆ ಪ್ರಕ್ರಿಯೆ ಶುರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಬೆಂಗಳೂರಿನ ಜೆ. ಜೆ. ಜಿ ಏರೋ ಪ್ರೈ. ಲಿ ವತಿಯಿಂದ ಐ.ಟಿ.ಐ., ಎಸ್.ಸಿ.ವಿ.ಟಿ ಮತ್ತು ಎನ್.ಸಿ.ವಿ.ಟಿ. ವಿಭಾಗಗಳಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಹಾಗೂ ಐ.ಟಿ.ಐ. ಕೊನೆಯ ವರ್ಷ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಮತ್ತು ಟರ್ನರ್, ಟೂಲ & ಡೈಮೇಕಿಂಗ, ಪಿಟ್ಟರ್, ಮಷಿನಿಸ್ಟ್ ಹಾಗೂ ಮಷಿನಿಸ್ಟ್ ಗ್ರೆಂಡರ್ ವೃತ್ತಿಗಳ 18 ರಿಂದ 28 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ಹಾಗೂ ನೇರ ನೇಮಕಾತಿ ಆಯ್ಕೆ ಪ್ರಕ್ರಿಯೆಯನ್ನು ಮೇ 23 ರಂದು ಬೆಳಿಗ್ಗೆ 9 ಗಂಟೆಗೆ ವಿದ್ಯಾನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿ, ಆಧಾರ ಕಾರ್ಡ ಹಾಗೂ ಇ ಮೇಲ್ ಐಡಿಗಳೊಂದಿಗೆ ಭಾಗವಹಿಸಬೇಕು ಎಂದು ವಿದ್ಯಾನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಹೇಳಲಾಗಿದೆ.












Click it and Unblock the Notifications