ಕಾಂಗ್ರೆಸ್ ಜನಕಲ್ಯಾಣ ಸಮಾವೇಶ ಮಾಡಿದ್ದೇ ಈ ಕಾರಣಕ್ಕಾಗಿ: ಮಾಜಿ ಸಿಎಂ
ಹುಬ್ಬಳ್ಳಿ, ಡಿಸೆಂಬರ್ 06: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಫೆವಿಕಾಲ್ ಹಾಕಿ ಸಿದ್ಧರಾಮಯ್ಯ ಅವರು ಕೂತಿದ್ದಾರೆ. ಇತ್ತ ಕಾಂಗ್ರೆಸ್ ಒಳಗೆಯೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಲು ತುದಿಗಾಲ ಮೇಲೆ ಕೂತಿದ್ದಾರೆ. ಅವರೆಲ್ಲರು ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣರಾಗಲಿದ್ದಾರೆ. ಹಾಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತದಲ್ಲಿ ಒಳ ಬೇಗುದಿ ಇದೆ. ಡಿಸಿಎಂ, ಸಿಎಂ ಆಗಲು ತುದಿಗಾಲ ಮೇಲೆ ಕೂತಿದ್ದಾರೆ. ಆದರೆ ಫೆವಿಕಾಲ್ ಹಾಕಿ ಕೂತ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿಗೆ ಕಿತ್ತುಕೊಳ್ಳಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯತ್ನಿಸಿದ್ದಾರೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನೋಡಿಕೊಳ್ಳುತ್ತಿದ್ದರೆ ನಾವೇನು ಮಾಡೋಣ ಎಂಬುದನ್ನು ಈಗಾಗಲೇ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರಶ್ನೆ ಮಾಡಿದ್ದಾರೆ. ಇವರಿಬ್ಬರೇ ಮಾಡಿದರೆ ನಮ್ಮದೇನು ಪಾತ್ರ ಎಂದಿದ್ದಾರೆ. ಬರುವ ದಿನಗಳಲ್ಲಿ ಇದು ದೊಡ್ಡ ಸ್ವರೂಪ ಪಡೆಯುತ್ತದೆ. ಹೀಗಾಗಿ ಈ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂದು ಭವಿಷ್ಯ ನುಡಿದರು.
ಜೀರೋ ಸರ್ಕಾರ: ಈ ಕಾರಣಕ್ಕೆ ಜನ ಕಲ್ಯಾಣ ಸಮಾವೇಶ
ಹಾಸನದಲ್ಲಿ ಕಾಂಗ್ರೆಸ್ನಿಂದ ಜನ ಕಲ್ಯಾಣ ಉತ್ಸವ ನಡೆಯಿತು. ಯಾವ ಪುರುಷಾರ್ಥಕ್ಕೆ ಅದನ್ನು ಮಾಡಿದ್ದಾರೆ. ಜನಕಲ್ಯಾಣ ಮಾಡಲಿ ಎಂದು ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನವರು ಜನಕಲ್ಯಾಣ ಮರೆತು ಸಮಾವೇಶದಲ್ಲಿ ಮುಳುಗಿದ್ದಾರೆ. ರಾಜ್ಯದ ಹಣಕಾಸನ್ನು ಇವರು ದಿವಾಳಿ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಇರುವುದು ಜೀರೋ ಸರ್ಕಾರ. ಅಭಿವೃದ್ಧಿಯಲ್ಲಿ ಜೀರೋ, ಸಾಮಾಜಿಕ ನ್ಯಾಯಾಲಯದಲ್ಲಿ ಜೀರೋ, ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಜೀರೋ. ಹಣಕಾಸಿನ ದಿವಾಳಿ ಮಾಡಿ ಅಭಿವೃದ್ಧಿ ಶೂನ್ಯ ಮಾಡಿದೆ. ಹೆಜ್ಜೆ ಹೆಜ್ಜೆಗೂ ಹಗರಣಗಳನ್ನು ಮಾಡುತ್ತಿದೆ. ಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣಗಳ ಮೇಲೆ ಪ್ರಭಾವ ಬೀರಬೇಕೆಂಬ ಕಾರಣದಿಂದಲೇ ಸರ್ಕಾರ ಹೀಗೆ ಸಮಾವೇಶ ಮಾಡಿದೆ. ಸರ್ಕಾರಿ ದುಡ್ಡಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಅದೇ ದುಡ್ಡನ್ನು ಅಭಿವೃದ್ಧಿಗೆ ಬಳಕೆ ಮಾಡಬಹುದಿತ್ತು. ಸಮಾವೇಶ ಮಾಡಿಕೊಳ್ಳುವ ಮೂಲಕ ಸಿಎಂ ತಮಗೆ ಆನೆ ಬಲ ತುಂಬಿಕೊಳ್ಳುವುದಲ್ಲ. ಜನರಿಗೆ ಆನೆ ಬಲ ತುಂಬುವ ಕೆಲಸ ಆಗಬೇಕಿದೆ. ಅಸ್ಥಿರತೆಯಲ್ಲಿ ಸಿದ್ದರಾಮಯ್ಯ ಕಾಲ ದೂಡುತ್ತಿದ್ದಾರೆ ಎಂದು ದೂರಿದರು.
ಸಿಎಂ ದೊಡ್ಡಾಟದ ಪ್ರಮುಖ ಪಾತ್ರಧಾರಿ
ಬಿಜೆಪಿಯು ವಕ್ಫ್ ವಿರುದ್ಧ ಹೋರಾಟ ಮಾಡುತ್ತಿರುವುದು ನಾಟಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಗಳೇ ಈ ದೊಡ್ಡಾಟದ ಪ್ರಮುಖ ಪಾತ್ರಧಾರಿ ಆಗಿದ್ದಾರೆ. ಅವಿರೋಧಪಕ್ಷವಾಗಿ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಕೆಲಸ, ಸಿಎಂಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ ಎಂದು ಲೇವಡಿ ಮಾಡಿದರು.
ನಾವು ಎಲ್ಲಿಯೂ 10 ಕೆ.ಜಿ. ಅಕ್ಕಿ ಕೊಡುತ್ತಿದ್ದೇವೆ ಅಂತ ನಾವೆಲ್ಲೂ ಹೇಳಿಲ್ಲ. ಕಾಂಗ್ರೆಸ್ ನವರೇ 10 ಕೆಜಿ ಕೊಡುವುದಾಗಿ ಹೇಳಿದ್ದರು. ಆದರೆ, ಒಂದಗಳು ಅಕ್ಕಿಯನ್ನೂ ರಾಜ ಸರ್ಕಾರ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ ಎಂದು ಹೇಳಲು ನಾಚಿಕೆ ಎಂದು ತಿವಿದರು.
ಬಿಜೆಪಿ ಬಣ ರಾಜಕಾರಣ ಸೇರಿದಂತೆ ಇತ್ಯಾದಿ ವಿಷಯಗಳು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಲಿವೆ. ಈಗಾಗಲೇ ಸದಸ್ಯತ್ವ ಅಭಿಯಾನ ಮುಗಿಸಿದ್ದೇವೆ. ಸದಸ್ಯತ್ವ ಅಭಿಯಾನದ ನಂತರ ರಾಜಕೀಯವಾಗಿ ಹಲವಾರು ಬೆಳವಣಿಗೆಗಳು ನಡೆದಿವೆ.
ಸಂಘಟನಾತ್ಮಕ ಬೆಳವಣಿಗೆ, ರಾಜಕೀಯ ಸ್ಥಿತಿಗತಿಗಳ ಕುರಿತು ಕೋರ್ ಕಮಿಟಿಯಲ್ಲಿ ಚರ್ಚಿಸುತ್ತೇವೆ. ಬಿಜೆಪಿಯ ಆಂತರಿಕ ವಿಚಾರಗಳೂ ಚರ್ಚೆಯಾಗಲಿವೆ ಎಂದರು.
ಸದನದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಯಾಗಲಿ
ಬೆಳಗಾವಿಯಲ್ಲಿ ಮುಂದಿನ ವಾರದಿಂದ ಚಳಿಗಾಳ ಅಧಿವೇಶನ ಆರಂಭವಾಗುತ್ತಿದೆ. ಅಧಿವೇಶನದಲ್ಲಿ ಯಾವ ಹಗರಣಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಕುರಿತು ಚರ್ಚೆಯಾಗಲಿದೆ. ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲೆಂದೇ ಬೆಳಗಾವಿ ಅಧಿವೇಶನ ಮಾಡಲಾಗುತ್ತದೆ. ಆ ರೀತಿ ನಡೆದುಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಆದರೆ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕ ನೀರಾವರಿ ಯೋಜನೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಅವರು ದೂರಿದರು.












Click it and Unblock the Notifications