ಅಮಿತ್ ಶಾ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ: ಜಗದೀಶ್ ಶೆಟ್ಟರ್ ಕಟ್ಟಿ ಹಾಕಲು ಬಿಜೆಪಿ ರಣತಂತ್ರ
ಹುಬ್ಬಳ್ಳಿ, ಏಪ್ರಿಲ್, 25: ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿನ ಬಿಜೆಪಿಯನ್ನು ಭದ್ರಪಡಿಸುವ ಉದ್ದೇಶದಿಂದ ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿದೆ. ಹಾಗೆಯೆ ಈ ಮೂಲಕ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರನ್ನು ಮಣಿಸಲು ಸಭೆಯಲ್ಲಿ ರಣತಂತ್ರ ರೂಪಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಕುರಿತು ಸಭೆಯನ್ನು ಮಾಡಲಾಗಿದ್ದು, ಹಾಗೆಯೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಗೊಳಿಸುವ ಬಗ್ಗೆಯೂ ಚರ್ಚೆ ಮಾಡಲಾಯಿತು. ಇತ್ತೀಚೆಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್‌ಗೆ ಠಕ್ಕರ್ ಕೊಡಲು ಬಿಜೆಪಿ ರಣತಂತ್ರ ರೂಪಿಸಿದ್ದು, ಈ ಬಗ್ಗೆ ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ಮತಗಳನ್ನು ಭದ್ರಪಡಿಸುವುದರ ಜೊತೆಗೆ ಇನ್ನುಳಿದ ಮತಗಳನ್ನು ಸೆಳೆಯುವ ಬಗ್ಗೆ ಚುನಾವಣಾ ಚಾಣಕ್ಯ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಬಿಜೆಪಿ ಬಾವುಟವನ್ನು ಮತ್ತಷ್ಟು ರಾರಾಜಿಸುವಂತೆ ಮಾಡಲು ಕಾರ್ಯಕರ್ತರು ಹಾಗೂ ನಾಯಕರು ಶ್ರಮಿಸುತ್ತಿದ್ದು, ಇಂತಹದೊಂದು ಮಹತ್ವದ ಸಭೆಗೆ ಶಾಸಕ ಅರವಿಂದ ಬೆಲ್ಲದ್, ಅಮೃತ್ ದೇಸಾಯಿ, ಸಚಿವ ಶಂಕತ್ ಪಾಟೀಲ ಮುನೇನಕೊಪ್ಪ ಸಾಥ್ ನೀಡಿದ್ದಾರೆ.
ಸಿದ್ದರಾಮಯ್ಯ ಕ್ಷಮೆ ಕೇಳಬೇಕು
ಅಲ್ಲದೆ ಲಿಂಗಾಯುತರ ಬಗ್ಗೆ ಹಗುರವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷಮೆ ಕೇಳಿಲ್ಲ. ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಈ ಬಗ್ಗೆ ಈಗಾಗಲೇ ಚುನಾವಣೆ ಆಯೋಗಕ್ಕೆ ದೂರ ಕೊಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದರು. ಸೋಮವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಗೌರವಯುತ ಸ್ಥಾನದಲ್ಲಿರುವವರು ಹಾಗೂ ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆ ಇದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
ಲಿಂಗಾಯತ ಸಮುದಾಯ ನಮಗೆ ಅಸ್ತ್ರ ಅಲ್ಲ. ಲಿಂಗಾಯತರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್‌ನವರಿಗೆ, ರಾಹುಲ್ ಗಾಂಧಿ ಅವರಿಗೆ ಸಮುದಾಯದ ಮೇಲೆ ಪ್ರೀತಿ ಇದ್ದರೆ ಲಿಂಗಾಯತ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಲಿ ನೋಡೋಣ. ನಾವು ಮೂರು ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದಿದ್ದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಸರುವ ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಹೋಗಿರುವುದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಹಳೆ ಪ್ಲೇಯರ್ ರಿಟೈರ್ಡ್ ಆಗಿ ಅಂದಿದ್ದೇವು. ಆದರೆ ಅವರು ಮತ್ತೊಂದು ಟೀಟ್‌ನಲ್ಲಿ ಆಡೋಕೆ ಹೋಗಿದ್ದಾರೆ. ಆದರೂ ಈ ಸಲ ಕಪ್ ನಮ್ದೇ ಎಂದು ಜಗದೀಶ್ ಶೆಟ್ಟರ್ ವಿರುದ್ಧ ವ್ಯಂಗ್ಯವಾಡಿದರು.
ತಮಗೆ ಟಿಕೆಟ್ ತಪ್ಪಿಸಿರುವ ವಿಷಯ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಗಮನಕ್ಕಿಲ್ಲ ಎನ್ನುವ ಜಗದೀಶ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಶಿ, ಶೆಟ್ಟರ್ ಬದಲಾವಣೆ ಬಗ್ಗೆ ಅಮಿತ್ ಶಾ ,ಮೋದಿ ಮಟ್ಟದಲ್ಲಿ ಈ ನಿರ್ಧಾರವಾಗಿತ್ತು. ಅಮಿತ್ ಶಾ, ಜಗದೀಶ್ ಶೆಟ್ಟರ್ ಜೊತೆ ಮಾತಾಡಿದ್ದಾರೆ. ಅಮಿತ್ ಶಾ ಅವರು ಶೆಟ್ಟರ್‌ಗೆ ಕರೆ ಮಾಡಿ, ನಾವು ನಿಮಗೆ ರಾಜ್ಯ ಸಭಾ ಸದಸ್ಯ ಸ್ಥಾನ, ಅಥವಾ ತಾವು ಬಯಸುವ ಯಾವುದಾದರೂ ಸ್ಥಾನ ನೀಡುವುದಾಗಿ ಹೇಳಿದ್ದರು. ನೀವು ಹೇಳುವ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಸಹ ಹೇಳಿದ್ದರು ಎಂದರು.












Click it and Unblock the Notifications