Jagadish Shettar Quits BJP: ಬಿಜೆಪಿಗೆ ರಾಜೀನಾಮೆ ನೀಡುವುದನ್ನು ಘೋಷಿಸಿದ ಜಗದೀಶ್ ಶೆಟ್ಟರ್
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯುವುದನ್ನು ಖಚಿತಪಡಿಸಿದ್ದಾರೆ. ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಸಂಧಾನ ವಿಫಲವಾದ ಬಳಿಕ ಜಗದೀಶ್ ಶೆಟ್ಟರ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು ಬಿಜೆಪಿಗೆ ದೊಡ್ಡ ಹಿನ್ನಡೆಯಾದಂತಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಧರ್ಮೇಂದ್ ಪ್ರಧಾನ್ ಮತ್ತು ಪ್ರಹ್ಲಾದ್ ಜೋಶಿ ಸೇರಿ ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಈ ನಾಯಕರ ಮಾತಿಗೆ ಜಗ್ಗದ ಜಗದೀಶ್ ಶೆಟ್ಟರ್ ರಾಜೀನಾಮೆಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಟಿಕೆಟ್ ಸಿಗದೇ ಬೇಸತ್ತ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ
ಬಿಜೆಪಿ ನಾಯಕರ ಜೊತೆಗಿನ ಮಾತುಕತೆ ವಿಫಲವಾದ ಬಳಿಕ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಈಗಾಗಲೇ ಲಕ್ಷ್ಮಣ ಸವದಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೇಸ್‌ಗೆ ಸೇರ್ಪಡೆಯ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಕೂಡ ಬಿಜೆಪಿ ತೊರೆಯುತ್ತಿರುವುದು ಚುನಾವಣೆಯ ಹೊಸ್ತಿಲಲ್ಲಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್ ಸೇರಿದಂತೆ ಕೆಲ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ನಿರಾಕರಿಸಿದೆ. ಇದು ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ತೀವ್ರ ಅಸಮಾಧಾನವುಂಟು ಮಾಡಿತ್ತು. ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದ ಜಗದೀಶ್ ಶೆಟ್ಟರ್ ಬಂಡಾಯದ ಸುಳಿವು ನೀಡಿದ್ದರು. ಈ ಮಧ್ಯೆ ಟಿಕೆಟ್ ಹಂಚಿಕೆ ವಿಚಾರವಾಗಿ ಹೈಕಮಾಂಡ್ ಪಟ್ಟು ಬದಲಿಸದ ಹಿನ್ನೆಲೆಯಲ್ಲಿ ತಮ್ಮ ದೃಢ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತೆಗೆದುಕೊಂಡಿದ್ದಾರೆ.
ಶನಿವಾರ ತಡರಾತ್ರಿ ರಾಜ್ಯ ಹಾಗೂ ಕೇಂದ್ರ ನಾಯಕರ ಜೊತೆಗೆ ಮಾತುಕತೆ ನಡೆದಿದ್ದು ಈ ಸಂಧಾನ ಸಭೆ ವಿಫಲವಾಗಿದೆ. ಬಳಿಕ ಮಶಧ್ಯಮಗಳ ಜೊತೆಗೆ ಮಾತನಾಡಿರುವ ಜಗದೀಶ್ ಶೆಟ್ಟರ್ ಭಾನುವಾರ ಬೆಳಿಗ್ಗೆ ಶಿರಸಿಯಲ್ಲಿ ವಿಧಾನಸಭಾಧ್ಯಕ್ಷರನ್ನು ಭೇಟಿಯಾಗುವುದಾಗಿ ತಿಳಿಸಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ತನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದ್ದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದಿದ್ದಾರೆ. ಆದರೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೋ ಅಥವಾ ಪಕ್ಷೇತರನಾಗಿ ಸ್ಪರ್ಧಿಸಲಿದ್ದಾರೆಯೋ ಎಂಬ ಬಗ್ಗೆ ಜಗದೀಶ್ ಶೆಟ್ಟರ್ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಕಾರ್ಯಕರ್ತರ ಅಭಿಪ್ರಾಯ ಪಡೆದು ಈ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.












Click it and Unblock the Notifications