ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಜಯಮೃತ್ಯುಂಜಯ ಶ್ರೀ ಆಗ್ರಹ
ಹುಬ್ಬಳ್ಳಿ, ಅಕ್ಟೋಬರ್ 06: ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸರಿಯಾದ ಹುದ್ದೆ ಕೊಡುತ್ತಿಲ್ಲ. ಲಿಂಗಾಯತ ಅಧಿಕಾರಿಗಳನ್ನು ನಿರ್ಲಕ್ಷ್ಯ ಮಾಡುವ ಬಗ್ಗೆ ಶಾಮನೂರು ಶಿವಶಂಕರಪ್ಪನವರ ಹೇಳಿದ್ದು ಸರಿ ಇದೆ. ಕೆಲ ಲಿಂಗಾಯುತ ಅಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮಾತನಾಡಿ ಸರಿ ಮಾಡಲಿ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು, ಲಿಂಗಾಯತ ಅಧಿಕಾರಿಗಳಿಗಳನ್ನು ಕಡೆಗಣಿಸಲಾಗುತಿದೆ ಎಂಬ ಮಾತು ಕೇಳಿ ಬಂದಿದೆ. ಈ ಕುರಿತು ಶಾಮನೂರು ಶಿವಶಂಕರಪ್ಪನವರು ಹೇಳಿದರಲ್ಲಿ ಮಾಹಿತಿಯಿದ್ದು, ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷರು ಹಾಗೂ ಹಿರಿಯರಾಗಿರುವ ಕಾರಣ ಲಿಂಗಾಯತ ಅಧಿಕಾರಿಗಳು ಅವರಿಗೆ ಹೇಳಿರಬಹುದು ಎಂದರು.

ನನ್ನ ಬಳಿಯೂ ಕೇಲ ಲಿಂಗಾಯತ ಅಧಿಕಾರಿಗಳು ಹೇಳಿದರು. ಆದರೆ ನಾನು ಸಮಾಜದ ಗುರುಗಳು ಆಗಿದ್ದರಿಂದ ಏನು ಮಾತಾಡಲಿಲ್ಲ. ಆಡಳಿತಾತ್ಮಕ ವಿಷಯದಲ್ಲಿ ಕೈ ಹಾಕಬಾರದು ಎನ್ನುವ ಕಾರಣಕ್ಕೆ ಏನು ಮಾತಾಡಿಲ್ಲ. ಹೀಗಾಗಿ ಕೂಡಲೇ ಮುಖ್ಯಮಂತ್ರಿಗಳು ಶಾಮನೂರು ಶಿವಶಂಕರಪ್ಪನವರ ಜೊತೆಗೆ ಮಾತನಾಡಬೇಕು. ಯಾವುದೇ ತಪ್ಪು ಸಂದೇಶ ಹೋಗಬಾರದು ಎಂದು ಹೇಳಿದರು.
ಲಿಂಗಾಯತ ಸಮಾಜದ ಅಧಿಕಾರಿಗಳು ದಕ್ಷ ಹಾಗೂ ಸಮರ್ಥರಿದ್ದಾರೆ. ಅಂತಹ ಅಧಿಕಾರಿಗಳಿಗೆ ಸೂಕ್ತ ಸ್ಥಾನ ಮಾನ ಕೊಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಅಕ್ಟೋಬರ್ 13ರಂದು ಪಂಚಮಸಾಲಿ ಮೀಸಲಾತಿ ಎರಡನೇ ಹಂತದ ಸಮಾವೇಶ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಆಗ್ರಹಿಸಿ ಅಕ್ಟೋಬರ್ 13 ರಂದು ಎರಡನೇ ಹಂತದ ಸಮಾವೇಶವನ್ನು ಹುಬ್ಬಳ್ಳಿ ಹೊರವಲಯದ ಗಬ್ಬೂರು ಬೈಪಾಸ್ ಪಕ್ಕದ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಈಗಾಗಲೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಹೋರಾಟ ಯಾತ್ರೆ ಆರಂಭವಾಗಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಈಗ ಧಾರವಾಡ ಜಿಲ್ಲೆಯ ಸಮಾವೇಶ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಮೈದಾನದಲ್ಲಿ ನಡೆಸಲಾಗುತ್ತದೆ. ಲಿಂಗಾಯತ ಉಪ ಪಂಗಡಗಳಿಗೆ ಕೇಂದ್ರದಿಂದ ಓಬಿಸಿ ದರ್ಜೆ ಕೊಡಲು ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಇಟ್ಟು ಹೋರಾಟ ಆರಂಭ ಮಾಡಲಾಗುತ್ತದೆ ಎಂದರು.
ಸಮಾವೇಶ ನಡೆಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆಗೆ ಸಲ್ಲಿಸಲಿದ್ದು, ಈ ಮೂಲಕ ವಿನೂತನ ಹೋರಾಟ ನಡೆಸಲಾಗುತ್ತಿದೆ ಎಂದ ಅವರು, 2A ಮೀಸಲಾತಿ, ಲಿಂಗಾಯತ ಉಪ ಪಂಗಡಗಳಿಗೆ ಕೇಂದ್ರದಿಂದ ಓಬಿಸಿ ದರ್ಜೆ ನೀಡಲು ಮೂರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಕಳೆದ ಸರ್ಕಾರ ಕೊನೆಯ ಗಳಿಗೆಯಲ್ಲಿ ಮೀಸಲಾತಿ ಘೋಷಣೆ ಮಾಡಲಾಯಿತು. ಚುನಾವಣೆ ಘೋಷಣೆ, ನೀತಿ ಸಂಹಿತೆಯಿಂದ ಮೀಸಲಾತಿ ಜಾರಿ ಆಗಲಿಲ್ಲ. ಕಾನೂನು ತೊಡಕು ಆಯಿತು. ಈಗಿನ ಸರ್ಕಾರಕ್ಕೆ ಸಹ ನಾವು ಕೇಳುತ್ತಿದ್ದೇವೆ. ಹೋರಾಟದ ಮೂಲಕ ನಮ್ಮ ಮೀಸಲಾತಿ ಪಡದೇ ತಿರುತ್ತೇವೆ ಸರ್ಕಾರ ನಮ್ಮನ್ನು ಮಾತುಕತೆಗೆ ಕರೆಯಬೇಕು ಎಂದು ಒತ್ತಾಯ ಮಾಡಿದರು.












Click it and Unblock the Notifications