ಬಿಜೆಪಿ ಮುಖಂಡರ ವಿರುದ್ಧ ಮತ್ತೆ ಜಗದೀಶ ಶೆಟ್ಟರ್ ಅಸಮಾಧಾನ?: ಬೆಳಗಾವಿ ಬಗ್ಗೆ ಸಂಜೆ ತಿಳಿಯಲಿದೆ, ನಂತರ ನನ್ನ ನಿರ್ಧಾರ
ಬೆಂಗಳೂರು, ಮಾರ್ಚ್ 14: ಲೋಕಸಭಾ ಚುನಾವಣೆಯ ಎರಡನೇ ಪಟ್ಟಿಯಲ್ಲಿ ನನಗೆ ಟಿಕೆಟ್ ಘೋಷಣೆ ಆಗದಿದ್ದಕ್ಕೆ ನಾನು ಪ್ರತಿಕ್ರಿಯಿಸಲ್ಲ. ಸದ್ಯ ಬೆಳಗಾವಿ ಕ್ಷೇತ್ರದ ಕುರಿತು ಚರ್ಚೆಗಳು ಆಗುತ್ತವೆ. ಇದು ಸಂಜೆಯೊಳಗೆ ಗೊತ್ತಾಗಲಿದೆ. ಅದಾದ ಬಳಿಕವೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಪಕ್ಷದ ವಿರುದ್ಧ ಜಗದೀಶ್ ಶೆಟ್ಟರ್ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಲೋಕಸಭಾ ಚುನಾವಣೆ ಟಿಕೆಟ್, ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಧಾರವಾಡ ಹಾಗೂ ಹಾವೇರಿ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಗಳಾಗಿದ್ದವು. ಈಗ ಟಿಕೆಟ್ ಘೋಷಣೆ ಆಗಿದೆ. ಈಗ ಬೆಳಗಾವಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇವತ್ತೆ ತೀರ್ಮಾನ ಆಗಲಿದೆ. ಈಗಲೇ ಯಾವ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹೈಕಮಾಂಡ್ ನಿರ್ಧಾರದ ನಂತರ ನನ್ನ ನೀರ್ಣಯ ಪ್ರಕಟಿಸುತ್ತೇನೆ ಎಂದು ಅವರು ಹೇಳಿದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತಲೇ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಇದೀಗ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಆದ ಘಟನೆ ಮತ್ತೆ ಮರುಳಿಸುವ ಸಾಧ್ಯತೆ ಇದೆ ಅಂತಲೂ ಕೆಲವರು ಮಾತನಾಡುತ್ತಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಶೆಟ್ಟರ್ ಅಸಮಾಧಾನ
ಟಿಕೆಟ್ ಸಿಗದಿದ್ದರೆ, ಜಗದೀಶ್ ಶೆಟ್ಟರ್ ಅವರು, ಬಂಡಾಯ ಏಳುವ, ಇಲ್ಲವೇ ಮುಕ್ತವಾಗಿ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಗಳು ಇವೆ. ಈ ಹಿಂದಿನ ಚುನಾವಣೆಯಲ್ಲಿ ಟಿಕೆಟ್ ಬೇಡ ಎಂದಾಗಿ ಇಂತದ್ದೆ ಬೆಳವಣಿಗೆಗಳು ನಡೆದಿದ್ದವು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಎಲ್ಲದ್ದಕ್ಕು ಜನರೇ ಉತ್ತರ ಕೊಡುತ್ತಾರೆ ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಅವರು ಸಿಡಿಮಿಡಿಗೊಂಡರು.

ಎಲ್ಲಿ ಮಾತನಾಡಬೇಕೋ ಮಾತನಾಡುತ್ತೇನೆ: ಶೆಟ್ಟರ್
ಜಗದೀಶ್ ಶೆಟ್ಟರ್ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೇ ಏನೂ ಮಾತನಾಡುವುದಿಲ್ಲ. ಯಾವ ವೇದಿಕೆಯಲ್ಲಿ ಯಾರ ಮುಂದೆ ಹೇಳಬೇಕೋ ಆ ಸಂದರ್ಭದಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.
ಸದ್ಯ ಬೆಳಗಾವಿ ಟಿಕೆಟ್ ಕುರಿತು ಅಲ್ಲಿಯ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದೇನೆ. ಹೈಕಮಾಂಡ್ ನಾಯಕರ ಜೊತೆಗೂ ಚರ್ಚೆ ನಡೆಸುತ್ತೇನೆ. ಹೈಕಮಾಂಡ್ ತೀರ್ಮಾಣಕ್ಕೆ ಅಂತಿಮವಾಗಿ ಬದ್ದವಾಗಿರುತ್ತೇನೆ. ಬೆಳಗಾವಿಯಲ್ಲಿ ಪರಿಸ್ಥಿತಿ ಸರಿ ಇಲ್ಲ ಎನ್ನುವುದು ಸುಳ್ಳು ಎಂದು ಬೆಳಗಾವಿ ಸ್ಪರ್ಧೆಗೆ ನಾಯಕರ ವಿರೋಧದ ಪ್ರಶ್ನೆಗೆ ಅವರು ಉತ್ತರಿಸಿದರು.

ಮೋದಿ ಪ್ರಧಾನಿ ಮಾಡುವುದೇ ಗುರಿ
ನನ್ನ ಮತ್ತು ಸ್ಥಳೀಯ ಕಾರ್ಯಕರ್ತರೊಂದಿಗಿನ ಸಂಬಂಧ ಎಂದಿಗೂ ದೂರ ಆಗುವುದಿಲ್ಲ. ನರೇಂದ್ರ ಮೋದಿಯವರನ್ನ 3ನೇ ಬಾರಿ ಪ್ರಧಾನಿ ಮಾಡುವುದೇ ನಮ್ಮ ಗುರಿಯಾಗಿದೆ. ಟಿಕೆಟ್ ಘೋಷಣೆಯ ಬಳಿಕ ರಾಜ್ಯದ ವರಿಷ್ಠರು, ರಾಜ್ಯಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಮಾತನಾಡಿದ್ದಾರೆ. ಕೆಲವೊಂದನ್ನು ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.
ಲೋಕಸಭಾ ಟಿಕೆಟ್ ಘೋಷಣೆ ಬಳಿಕ ಶೆಟ್ಟರ್ ಪಶ್ಚಾತಾಪ ಪಡುತ್ತಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವ ಪಕ್ಷದಲ್ಲಿದ್ದರು ಸಂತೋಷವಾಗಿ ಇರುತ್ತೇನೆ. ಸದ್ಯ ಬಿಜೆಪಿಯಲ್ಲಿದ್ದು ಈಗಲೇ ಇಲ್ಲಿಯೂ ನಾನು ಸಂತೋಷವಾಗಿದ್ದೇನೆ. ನಾನು ಪಶ್ಚಾತ್ತಾಪ ಪಡುವಂತೆ ಮಾಡುವವನು ಎಂದು ತಿರುಗೇಟು ಕೊಟ್ಟರು.
ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದು, ವಾತಾವರಣ ಚೆನ್ನಾಗಿದೆ. ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಶೆಟ್ಟರ್ ಕುಟುಂಬ ಬೆಂಗಳೂರಿಗೆ?
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಘೋಷಣೆಯಾಗದ ಹಿನ್ನೆಲೆ ಇಂದು ಹುಬ್ಬಳ್ಳಿ ಶೆಟ್ಟರ್ ನಿವಾಸದಲ್ಲಿ ಹಿತೈಷಿಗಳ ಸಭೆ ನಡೆಯಿತು. ಈ ವೇಳೆ ಪ್ರದೀಪ್ ಶೆಟ್ಟರ್, ನಾಗೇಶ್ ಕಲ್ಬುರ್ಗಿ, ಮಲ್ಲಿಕಾರ್ಜುನ ಸಾವುಕಾರ ಪಾಲ್ಗೊಂಡು ಹಲವು ವಿಷಯಗಳನ್ನು ಚರ್ಚಿಸಿದರು.
ಟಿಕೆಟ್ ಘೋಷಣೆ ಆದರೆ ಏನು ಮಾಡಬೇಕು, ಒಂದು ವೇಳೆ ಟಿಕೆಟ್ ಸಿಗದ್ದಿರೆ ಮುಂದಿನ ನಡೆ ಏನು ಎಂಬುದರ ಕುರಿತು ಆಪ್ತರ ಜೊತೆ ಶೆಟ್ಟರ್ ಸಮಾಲೋಚನೆ ನಡೆಸಿದರು. ಬೆಳಗಾವಿ ಕ್ಷೇತ್ರಕ್ಕೆ ತಮ್ಮ ಹೆಸರನ್ನು ಪರಗಣಿಸುವಂತೆ ಒತ್ತಡ ತರಲು ಇಂದು ಅವರು ತಮ್ಮ ಸಹೋದರ ಪ್ರದೀಪ್ ಶೆಟ್ಟರ್ ಅವರ ಜೊತೆಗೆ ರಾಜಧಾನಿಗೆ ಆಗಮಿಸುವ ನಿರೀಕ್ಷೆಗಳು ಇವೆ.
ಶೆಟ್ಟರ್ ನಿರ್ಧಾರಗಳು ತಮಗೆ ಮುಳುವು
ಶೆಟ್ಟರ್ ನಿರೀಕ್ಷೆ ಇಟ್ಟಿದ್ದ ಹಾವೇರಿ, ಧಾರವಾಡ ಕ್ಷೇತ್ರಗಳು ಬೇರೆಯವರ ಪಾಲಾಗಿವೆ. ಇದೀಗ ಕೊನೆಯದಾಗಿ ಉಳಿದಿರುವ ಬೆಳಗಾವಿ ಕ್ಷೇತ್ರವನ್ನು ಬಿಜೆಪಿ ನೀಡದಿದ್ದರೆ, ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಅವರು ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿತ್ತು ಎನ್ನಲಾಗಿದೆ.
ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ಬೇಡ ಎಂದ ಬಳಿಕ ಜಗದೀಶ್ ಶೆಟ್ಟರ್ ಅವರು ಕೈಗೊಂಡ ನಿರ್ಧಾರ, ಕಾಂಗ್ರೆಸ್ ಸೇರ್ಪಡೆ,ಅಲ್ಲಿದ್ದುಕೊಂಡು ಬಿಜೆಪಿ ವಿರುದ್ಧದ ಮಾತುಗಳು, ಟಿಕೆಟ್ ಸಿಗುವ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಅವರ ನಿರ್ಧಾರಗಳು ಬಹುಶಃ ಅವರಿಗೇ ಮುಳುವಾದಂತಿವೆ. ಇದು ಅವರ ರಾಜಕೀಯ ಜೀವನ ಹಾದಿಯನ್ನು ಬದಲಾಯಿಸುವ ಸಾಧ್ಯತೆಗಳು ದಟ್ಟವಾಗಿದೆ.












Click it and Unblock the Notifications