ಹುಬ್ಬಳ್ಳಿ: ಮಹಿಳೆಯ ತಲೆಯಲ್ಲಿತ್ತು ಒಂದಲ್ಲ..ಎರಡಲ್ಲ..ನೂರಲ್ಲ..450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆ
ಹುಬ್ಬಳ್ಳಿ, ಸೆಪ್ಟೆಂಬರ್ 04: ಬ್ರೈನ್ ಟ್ಯೂಮರ್ (ಮೆದುಳು ಗಡ್ಡೆ) ಸಮಸ್ಯೆಯಿಂದ ಬಳಲುತ್ತಿದ್ದ 37 ವರ್ಷದ ಮಹಿಳೆಯ ತಲೆಯಲ್ಲಿ ಒಂದಲ್ಲ..ಎರಡಲ್ಲ..ನೂರಲ್ಲ.. 450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆ ಪತ್ತೆಯಾಗಿದೆ. ಈ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ 450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆಯನ್ನು ಹೊರತೆಗೆಯುವಲ್ಲಿ ಹುಬ್ಬಳ್ಳಿ ನಗರದ ಶ್ರೀ ಬಾಲಾಜಿ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.
ಹಾವೇರಿ ಮೂಲದ ಈ ಮಹಿಳೆ ತಲೆನೋವು, ವಾಂತಿ, ಫಿಟ್ಸ್ ಹಾಗೂ ಕಣ್ಣು ಮಂಜಾಗುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿಯ ಆರೋಗ್ಯದ ಕುರಿತು ಆಸ್ಪತ್ರೆ ಮುಖ್ಯಸ್ಥ ಹಾಗೂ ಖ್ಯಾತ ನರರೋಗ ತಜ್ಞರಾದ ಡಾ.ಕ್ರಾಂತಿಕಿರಣ ಕೂಲಂಕುಷವಾಗಿ ತಪಾಸಣೆ ನಡೆಸಿದ್ದಾರೆ. ಸಮಹಿಳೆಗೆ ಎಂ.ಆರ್.ಐ ಸ್ಕ್ಯಾನ್ ಮಾಡಿಸಿ ನೋಡಿದಾಗ ಮೆದುಳಿನಲ್ಲಿ ಬೃಹತ್ ಗಾತ್ರದ ಗಡ್ಡೆ ಇರುವುದು ಕಂಡು ಬಂತು.

ಕೂಡಲೇ ಕಾರ್ಯಪ್ರವೃತ್ತರಾದ ಆಸ್ಪತ್ರೆ ವೈದ್ಯರ ತಂಡ, ಮಹಿಳೆಗೆ ಸತತ 5 ಗಂಟೆಗಳ ಕಾಲ ಕೌಶಲ್ಯಾಧಾರಿತ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆ ನಡೆಸಿ 450 ಗ್ರಾಂ. ತೂಕದ ಬೃಹತ್ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಖ್ಯಾತ ನರರೋಗ ತಜ್ಞರಾದ ಡಾ. ಕ್ರಾಂತಿಕಿರಣ, ಪ್ರತಿ ವಯಸ್ಕ ಮನುಷ್ಯನ ಮೆದುಳಿನ ತೂಕ ಸರಾಸರಿ 1200 ಗ್ರಾಂ (1.2 ಕೆ.ಜಿ)ಯಷ್ಟು ಇರುತ್ತದೆ. ಆಸ್ಪತ್ರೆಗೆ ದಾಖಲಾದ ಮಹಿಳೆಯ ಮೆದುಳಿನಲ್ಲಿ 450 ಗ್ರಾಂ.ನಷ್ಟು ಬೃಹತ್ ಗಾತ್ರದ ಗಡ್ಡೆ ಬೆಳೆದಿತ್ತು. ಇನ್ನು ಕೆಲ ದಿನ ಬಿಟ್ಟಿದ್ದರೆ ಜೀವಕ್ಕೇ ಆಪತ್ತು ಎದುರಾಗುತ್ತಿತ್ತು.
ಸ್ಕ್ಯಾನ್ ವರದಿ ಬಳಿಕ ತಡಮಾಡದೇ ಕಾರ್ಯಪ್ರವೃತ್ತರಾಗಿದ್ದರಿಂದ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಉನ್ನತ ಕೌಶಲ್ಯಗಳನ್ನು ಅಳವಡಿಸಿಕೊಂಡಿದ್ದರಿಂದ ಅತ್ಯಂತ ಕ್ಲಿಷ್ಟಕರವಾಗಿದ್ದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ರೋಗಿಯ ಮೆದುಳಿಗೆ ಹಾನಿಯಾಗದಂತೆ ಗಡ್ಡೆಯನ್ನು ಹೊರ ತೆಗೆಯಲಾಗಿದೆ ಎಂದರು.
ಇನ್ನು ಬ್ರೇನ್ ಟ್ಯೂಮರಗೆ ಎಲ್ಲ ಸಂದರ್ಭದಲ್ಲೂ ಒಂದೇ ತೆರನಾದ ನಿರ್ಧಿಷ್ಟ ಕಾರಣಗಳಿರುವುದಿಲ್ಲ. ಮೆದುಳಿನಲ್ಲಿರುವ ಜೀವಕೋಶಗಳು ಅಸಹಜವಾಗಿ ಬೆಳೆದು ಒಂದೆಡೆ ಸಂಗ್ರಹವಾಗುವುದಕ್ಕೆ ಟ್ಯೂಮರ್ ಎನ್ನಲಾಗುತ್ತದೆ. ನಿರಂತರ ತಲೆನೋವು, ತಲೆಸುತ್ತು, ವಾಕರಿಕೆ, ದೃಷ್ಠಿಯಲ್ಲಿ ಬದಲಾವಣೆ, ಮಾತಿನಲ್ಲಿ ಅಸ್ಪಷ್ಟತೆ, ಜ್ಞಾಪಕಶಕ್ತಿ ಕುಂಠಿತ, ಕೇಳುವಿಕೆಯಲ್ಲಿ ಗೊಂದಲ, ಫಿಟ್ಸ್, ಕೈ-ಕಾಲುಗಳು ಸ್ವಾಧೀನ ಕಳೆದುಕೊಳ್ಳುವುದು ಇತ್ಯಾದಿ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದಲ್ಲಿ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ತಿಳಿಸಿದರು.
ಸದ್ಯ ರೋಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಆಕೆಯ ತಲೆನೋವು ಮಾಯವಾಗಿ, ದೃಷ್ಠಿಯಲ್ಲಿ ಸ್ಪಷ್ಟತೆ, ಕೇಳುವಿಕೆ ಮತ್ತು ಮಾತಿನಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿದ್ದಾರೆ. ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಕ್ರಾಂತಿಕಿರಣ, ಡಾ. ಇತಿ ಸಿಂಗ್ ಪರ್ಮಾರ್, ಡಾ. ಅಖಿಲೇಶ ಜೋಶಿ, ಡಾ. ಭೀಮಾಶಂಕರ್, ಆಸ್ಪತ್ರೆಯ ಇತರೆ ವೈದ್ಯಕೀಯ ಸಿಬ್ಬಂದಿ ಇದ್ದರು.












Click it and Unblock the Notifications