Maha shivaratri 2023: ಹುಬ್ಬಳ್ಳಿಯಲ್ಲಿ ಕೇದಾರನಾಥನ ದರ್ಶನಕ್ಕೆ ಸಕಲ ಸಿದ್ಧತೆ, ಕಾರ್ಯಕ್ರಮಗಳ ವಿವರ ಇಲ್ಲಿದೆ
ಈ ವರ್ಷ ಹುಬ್ಬಳ್ಳಿಯಲ್ಲಿ ವಿಭಿನ್ನ ಹಾಗೂ ವಿನೂತನ ರೀತಿಯಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಹಾಗಾದರೆ ಕಾರ್ಯಕ್ರಮಗಳ ವಿವರಗಳನ್ನು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ, ಫೆಬ್ರವರಿ, 17: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಹಾ ಶಿವರಾತ್ರಿ ಆಚರಣೆ ಒಂದಿಲ್ಲೊಂದು ರೀತಿಯಲ್ಲಿ ಮೆರಗನ್ನು ಪಡೆದುಕೊಳ್ಳುತ್ತದೆ. ಆದರೆ ಈ ವರ್ಷ ಮಾತ್ರ ವಿಭಿನ್ನ ಹಾಗೂ ವಿನೂತನ ರೀತಿಯಲ್ಲಿ ಆಚರಣೆಗೆ ಸಿದ್ಧಗೊಂಡಿದ್ದು, ಕೇದಾರನಾಥನ ದರ್ಶನವನ್ನು ಹುಬ್ಬಳ್ಳಿಯಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ನಿರ್ಮಾಣ ಮಾಡಿರುವ ಕೇದಾರನಾಥನ ದಿವ್ಯದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಫೆಬ್ರವರಿ 18ರಂದು ದೇಶಪಾಂಡೆ ನಗರದ ಜಿಮಖಾನ್ ಮೈದಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕೇದಾರನಾಥನ ದಿವ್ಯ ದರ್ಶನ ಹಾಗೂ ಭಕ್ತಿ ಸಂಗೀತದಿಂದ ಶಿವನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಶಿವರಾತ್ರಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ಕ್ಷಮತಾ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಗೋವಿಂದ ಜೋಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲ ರೀತಿಯಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಅಲ್ಲದೇ ಬರುವ ಭಕ್ತರಿಗೆ ರುದ್ರಾಕ್ಷಿ ಹಾಗೂ ಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೇದಾರನಾಥನ ದರ್ಶನಕ್ಕೆ ಸಿದ್ಧತೆ
ಪವಿತ್ರ ಕೇದಾರನಾಥನ ದಿವ್ಯ ದರ್ಶನ-ಸಂಗೀತದೊಂದಿಗೆ ಶಿವನಾಮ ಸ್ಮರಣೆ ನಡೆಯಲಿದೆ. ಹಿಂದುಗಳ ಪವಿತ್ರ ಕ್ಷೇತ್ರ ಉತ್ತರ ಭಾರತದ ಪುರಾತನ ದೇವಾಲಯವಾದ ಕೇದಾರದಲ್ಲಿನ ಬೃಹತ್ ಕೇದಾರನಾಥನ ತದ್ರೂಪ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಅವಳಿ ನಗರದ ಭಕ್ತಾದಿಗಳಿಗೆ ದರ್ಶನ ಮಾಡಿಸುವ ಸಂಕಲ್ಪವನ್ನೂ ಹೊಂದಲಾಗಿದೆ. ಭಕ್ತರು ಗುಹಾಂತರ ಧ್ವಾರದ ಮೂಲಕ ಸಾಗಿ ಕೇದಾರನಾಥನ ದರ್ಶನ ಪಡೆದು ಮತ್ತೊಂದು ದ್ವಾರದ ಮೂಲಕ ಹೊರಬರುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.

ಕಾರ್ಯಕ್ರಮಗಳ ವಿವರ ಇಲ್ಲಿದೆ
ಫೆಬ್ರವರಿ 18 ರಂದು ಬೆಳಗ್ಗೆ 10 ಗಂಟೆಗೆ ಮುಂಡಗೋಡದ ಪಂ. ರುದ್ರಮುಖಿ ಮಹಾಸ್ವಾಮೀಜಿ ಹಿರೇಮಠ ಅವರಿಂದ ಪೂಜಾ ಕೈಂಕರ್ಯ ನಡೆಯಲಿವೆ. ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ದರ್ಶನಕ್ಕೆ ಬರುವ ಭಕ್ತರಿಗೆ ಪಂಚಮುಖಿ ರುದ್ರಾಕ್ಷಿ ಹಾಗೂ ಫಲಾಹಾರ ಮತ್ತು ಪ್ರಸಾದ ವಿತರಣೆ ಮಾಡಲಾಗುತ್ತದೆ.

ಸಂಜೆ 4 ಗಂಟೆಯಿಂದ ಖ್ಯಾತ ಸಂಗೀತ ಗಾರ್ತಿ ಅನನ್ಯ ಭಟ್ ಮತ್ತು ಬಿಗ್ ಬಾಸ್ ಸೀಸನ್ 6ರ ವಿನ್ನರ್ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications