HESCOM Guidelines: ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ: ಅಂಶಗಳು
ಹುಬ್ಬಳ್ಳಿ, ಸೆಪ್ಟಂಬರ್ 03: ಕರ್ನಾಟಕ ರಾಜ್ಯಾದ್ಯಂತ ಗಣೇಶೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ವಿಜೃಂಭಣೆಯ ಸಂಭ್ರಮಾಚರಣೆಗೆ ಸಜ್ಜಾಗಿರುವ ಛೋಟಾ ಮುಂಬೈ ಹುಬ್ಬಳ್ಳಿ ಮಂದಿಗೆ 'ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ' (ಹೆಸ್ಕಾಂ) ಮಾರ್ಗ ಸೂಚಿ ಹೊರಡಿಸಿದೆ. ಮುಂಜಾಗೃತೆಗಾಗಿ ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದೆ.
ಹೌದು, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಹೆಸ್ಕಾಂ ಮಂಗಳವಾರ ಹೊರಡಿಸಿದೆ. ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ್ ಕಿರಣ್ ಕುಮಾರ್ ಬಿ ರವರು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನಧಿಕೃತವಾಗಿ ವಿದ್ಯುತ್ ಲೈನ್‌ಗಳಿಗೆ, ಮನೆಗಳಿಂದ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯದಂತೆ ಕಟ್ಟುನಟ್ಟಿನ ಸೂಚನೆ ನೀಡಿದ್ದಾರೆ.

ಮಾರ್ಗಸೂಚಿಯ ಇತರ ಅಂಶಗಳ ವಿವರ
ಗಣೇಶೋತ್ಸವಕ್ಕಾಗಿ ಅಗತ್ಯ ವಿದ್ಯುತ್ ಸಂಪರ್ಕ ಪಡೆಯುವ ಮೊದಲು ಸಂಬಂಧಿಸಿದ ಹೆಸ್ಕಾಂ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳು ಇಲ್ಲದ್ದನ್ನು ಗಮನಿಸಬೇಕು.
ವಿದ್ಯುತ್ ಲೈನ್‌ನ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್ ಹಾಕಬಾರದು. ಸುರಕ್ಷತೆಯ ಅಂತರವನ್ನು ಕಾಯ್ದುಕೊಂಡು ಪೆಂಡಾಲ್ ಹಾಕುವಂತೆ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಸದ್ಯ ಮಳೆ ಇನ್ನೂ ಮುಗಿದಿಲ್ಲವಾದ್ದರಿಂದ ವಿದ್ಯುತ್ ಅವಘಡಗಳ ತಪ್ಪಿಸಲು ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ. ಹಬ್ಬದ ವೇಳೆ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳಿಗೆ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿಜರ್ಸನೆಗೂ ಕಟ್ಟುನಿಟ್ಟಿನ ಮುಂಜಾಗ್ರತಾ ಸೂಚನೆ
ಗಣೇಶನ ವಿಗ್ರಹ ವಿಸರ್ಜನೆ ದಿನವೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯುತ್ ತಂತಿಗಳಿಗೆ ತಾಗುವ ರೀತಿಯಲ್ಲಿ ಅತೀ ಎತ್ತರದ ಧ್ವಜ ಕಟ್ಟಬಾರದು. ಗಣೇಶನ ವಿಗ್ರಹಗಳ ವಿಸರ್ಜನಾ ಮೆರವಣೆಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್‌ಗಳ ಅಡಚಣೆ ಇದ್ದಲ್ಲಿ ಸಂಬಂಧಿಸಿದ ಹೆಸ್ಕಾಂ ಕಚೇರಿಯ ಗಮನಕ್ಕೆ ತರಬೇಕು. ಅಂತಹ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಗಣೇಶ ವಿಜಸರ್ಜನೆಗೆ ಅನುಕೂಲ ಮಾಡಿಕೊಡಲು ಹೆಸ್ಕಾಂ ಸದಾ ಸನ್ನದ್ದವಾಗಿರುತ್ತದೆ ಎಂದು ಹೆಸ್ಕಾಂ ತಿಳಿಸಿದೆ.
ಹೆಸ್ಕಾಂ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆ, ಐದು ದಿನ ಮತ್ತು ಏಳು, ಒಂಬಂತು ದಿನಗಳ ಆಚರಣೆ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೋದರೆ ಏನಾದರೂ ಅವಘಡಗಳು ಸಂಭವಿಸಿದರೆ ಅದಕ್ಕೆ ಹೆಸ್ಕಾಂ ಜವಾಬ್ದಾರಿಯಲ್ಲ. ಹೀಗಾಗಿ ಎಲ್ಲ ಗಣೇಶ ಮಂಡಳಿಗಳು ಸೂಕ್ತ ಸುರಕ್ಷತಾ ಕ್ರಮ ಅನುಸರಿಸಿ ಗಣೇಶ ಹಬ್ಬ ಆಚರಿಸಬೇಕೆಂದು ಹೆಸ್ಕಾಂ ಮಾರ್ಗಸೂಚಿ ಪ್ರಕಟಣೆಯಲ್ಲಿ ಅಧಿಕಾರಿಗಳು ನಿರ್ದೇಶಿಸಿದ್ದಾರೆ.












Click it and Unblock the Notifications