ಡಿಕೆಶಿ ಜೆಡಿಎಸ್ ಬಾವುಟ ಹಿಡಿದಿದ್ದಕ್ಕೆ ಈ ಕಾರಣ ಕೊಟ್ಟ ಕುಮಾರಸ್ವಾಮಿ
ಹುಬ್ಬಳ್ಳಿ, ಅಕ್ಟೋಬರ್ 28: "ಜನರ ಕಷ್ಟಗಳಿಗೆ ಯಾರು ಸ್ಪಂದಿಸುತ್ತಾರೋ ಅವರಿಗೆ ನನ್ನ ಬೆಂಬಲ ಇರುತ್ತೆ. ಅದು ಬಿಜೆಪಿಯೋ, ಕಾಂಗ್ರೆಸ್ಸೋ ಗೊತ್ತಿಲ್ಲ. ಯಾರು ಜನರ ಕಷ್ಟಗಳಿಗೆ ಬೆಂಬಲ ನೀಡುತ್ತಾರೋ ಅವರಿಗೆ ನಮ್ಮ ಬೆಂಬಲ" ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, "ಸಿದ್ದರಾಮಯ್ಯನವರು ಸರ್ಕಾರ ಬೀಳಿಸುವ ಕೆಲಸ ಮಾಡೋದಾದ್ರೆ ಮಾಡಲಿ, ಸಿದ್ದರಾಮಯ್ಯ ಪಕ್ಕಾ ಸೆಕ್ಯುಲಾರ್ ಬಿಡಿ, ನಾವೂ ಕೋಮುವಾದಿಗಳು" ಎಂದು ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ ಕಿಡಿಕಾರಿದರು. ಅಲ್ಲದೇ ಡಿಕೆಶಿ ಜೆಡಿಎಸ್ ಬಾವುಟ ಹಿಡಿದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ಮಾನವೀಯತೆ ದೃಷ್ಟಿಯಿಂದ ನಮ್ಮ ಕಾರ್ಯಕರ್ತರು ಡಿಕೆಶಿಗೆ ಬೆಂಬಲ ನೀಡಿರಬಹುದು. ಅದಕ್ಕೆ ಅವರು ಬಾವುಟ ಹಿಡಿದಿರಬಹುದು. ಅದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ಅದನ್ನು ಡಿಕೆಶಿಯವರನ್ನೇ ಕೇಳಬೇಕು" ಎಂದರು.
"ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ, ಸರ್ಕಾರಕ್ಕೆ ಸ್ವಲ್ಪ ಸಮಯ ಕೊಡಬೇಕಾಗಿದೆ. ನಾನು ಸರ್ಕಾರದ ವಿರುದ್ಧ ಟೀಕೆ ಮಾಡಲ್ಲ. ಬದಲಾಗಿ ಸಲಹೆ ನೀಡಿರುವೆ. ಜನರ ಸಮಸ್ಯೆಗಳಿಗೆ ಎಲ್ಲ ಪಕ್ಷಗಳು ಒಂದಾಗಿ ಕೆಲಸ ಮಾಡಲಿ. ರಾಜಕಾರಣ ಬೇರೆ ಮಾಡೋಣ. ನಾನು ನೆರೆ ಪ್ರವಾಹ ವೀಕ್ಷಣೆ ಬಗ್ಗೆ ಬೆಂಗಳೂರಿಗೆ ಹೋದ ನಂತರ ಸಿಎಂ ಜೊತೆ ಚರ್ಚೆಗೆ ಕಾಲಾವಕಾಶ ಕೋರುವೆ" ಎಂದರು.

"ಸಿದ್ದರಾಮಯ್ಯ ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ. ಮಾರ್ಚ್, ಏಪ್ರಿಲ್ ಗೆ ಚುನಾವಣೆಗೆ ಹೋದ್ರೆ ಜನರ ಬಗ್ಗೆ ಯೋಚಿಸುವವರು ಯಾರು? ನಾನು ಹತಾಶನಾಗಿಲ್ಲ, ನಾನು ಬಿಜೆಪಿ ಜೊತೆ ಹೋಗುವೆ ಅಂತ ಎಲ್ಲೂ ಹೇಳಿಲ್ಲ, ನಾನು ಸರ್ಕಾರವನ್ನು ಅಭದ್ರಗೊಳಿಸಲು ಮುಂದಾಗಿಲ್ಲ, ಸ್ಥಿರ ಸರ್ಕಾರದ ಬಗ್ಗೆ ಯೋಚಿಸುತ್ತಿದ್ದೇನೆ. ಜನರ ಪರವಾಗಿ ಚಿಂತನೆ ಮಾಡುತ್ತಿದ್ದೇನೆ" ಎಂದು ಕುಮಾರಸ್ವಾಮಿ ಉತ್ತರಿಸಿದ್ದಾರೆ.












Click it and Unblock the Notifications