ಈದ್ಗಾ ಮೈದಾನದ ಗಣಪತಿಗೆ ವಿದಾಯ:ಶಾಂತಿಯುತವಾಗಿ ವಿಸರ್ಜನೆಗೊಂಡ ವಿಘ್ನೇಶ್ವರ
ಹುಬ್ಬಳ್ಳಿ, ಸೆಪ್ಟೆಂಬರ್ 21: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ರಾಣಿ ಚೆನ್ನಮ್ಮ (ಈದ್ಗಾ)ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ವಿಸರ್ಜನೆ ಶಾಂತಿಯುತವಾಗಿ ನೆರವೇರಿದೆ. ಜೊತೆಗೆ ಮೆರವಣಿಗೆ ಕೂಡ ಅದ್ಧೂರಿಯಾಗಿ ನಡೆದಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಪ್ರತಿಷ್ಟಾಪನೆಗೊಂಡಿದ್ದ ಗಣಪತಿ, ಇಂದು ಸಕಲ ವಾದ್ಯ ವೈಭವದೊಂದಿಗೆ ವಿಸರ್ಜನೆಗೊಂಡಿದ್ದು, ಸಾಕಷ್ಟು ದಿನಗಳ ಹೋರಾಟ ಸುಖಾಂತ್ಯಗೊಂಡಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದ ಬೆನ್ನಲ್ಲೇ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗಣಪತಿ ಮೆರವಣಿಗೆ ಮಾಡುವ ಮೂಲಕ ವಿಶೇಷವಾಗಿ ಪೂಜೆ ಸಲ್ಲಿಸಿ ಹುಬ್ಬಳ್ಳಿಯ ಗ್ಲಾಸ್ ಹೌಸ್ ಹತ್ತಿರವಿರುವ ಬಾವಿಯಲ್ಲಿ ವಿಸರ್ಜನೆ ಮಾಡಲಾಗಿದೆ.

ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಮಾಹಾನಗರ ಪಾಲಿಕೆ ಅವಕಾಶ ಕೊಟ್ಟಿತ್ತು. ಕೆಲ ಷರತ್ತು ಕೂಡ ಹಾಕಿತ್ತು. ಅದರಂತೆ ಇಂದು 12 ಗಂಟೆಯೊಳಗೆ ಈದ್ಗಾ ಮೈದಾನದಿಂದ ಗಣೇಶ ಹೊರ ಬರಬೇಕು ಎನ್ನುವ ಷರತ್ತು ಹಾಕಲಾಗಿತ್ತು. ಸರಿಯಾಗಿ 11.45ಕ್ಕೆ ಈದ್ಗಾ ಮೈದಾನದಿಂದ ಗಣೇಶನನ್ನ ಹೊರಗೆ ತರಲಾಯಿತು. ಗಣೇಶ ಹೊರಬರುತ್ತಲೆ ಗಣೇಶ ಪ್ರಿಯರ ಘೋಷಣೆ ಮುಗಿಲು ಮುಟ್ಟಿತ್ತು. ಮೆರವಣಿಗೆಯ ಡಿಜೆ ಸದ್ದಿಗೆ ಮಹಿಳೆಯರು ಕುಣಿದು ಕುಪ್ಪಳಿಸಿದರು.
ಇನ್ನು ಈದ್ಗಾ ಮೈದಾನದ ಗಣೇಶ ವಿಸರ್ಜನೆ ವೇಳೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಭಾಗಿಯಾಗಿದ್ದರು. ಮೆರವಣಿಗೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್ ತಂಡ ಪ್ಯಾರಾಮಿಲಿಟರಿ ರ್ಯಾಪಿಡ್ ಆಕ್ಷನ್ ಫೋರ್ಸ್ ಸೇರಿದಂತೆ ನಗರದಾದ್ಯಂತ 5 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.












Click it and Unblock the Notifications