ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ಪ್ರತಿಷ್ಠಾಪನೆಗೊಂಡ ವಿನಾಯಕ: ಪೊಲೀಸ್ ಬಿಗಿ ಭದ್ರತೆಯಲ್ಲಿ ಅದ್ಧೂರಿ ಮೆರವಣಿಗೆ
ಹುಬ್ಬಳ್ಳಿ, ಸೆಪ್ಟೆಂಬರ್ 19:ವಿವಾದಾತ್ಮಕ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಶಾಂತಿಯುತವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ.ಮಂತ್ರಘೋಷಗಳ ಮೂಲಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ವಿಘ್ನ ನಿವಾರಕ ವಿನಾಯಕ ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾನೆ.
ನಗರದ ಮೂರುಸಾವಿರ ಮಠದ ಆವರಣದಿಂದ ಗಣೇಶಮೂರ್ತಿ ಮೆರವಣಿಗೆ ಆರಂಭವಾಗಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ಮಹಾವೀರಗಲ್ಲಿ, ತುಳಜಾಭವಾನಿ ವೃತ್ತ, ದಾಜೀಬಾನ್ ಪೇಟೆ, ಅಂಚಟಗೇರಿ ಓಣಿ ಮುಖಾಂತರ ರಾಯಣ್ಣ ವೃತ್ತದಲ್ಲಿ ಮೆರವಣಿಗೆ ಸಾಗಿ ಬಂದು ಈದ್ಗಾ ಮೈದಾನದಲ್ಲಿ ಗಣೇಶನನ್ನು ಸ್ಥಾಪನೆ ಮಾಡಲಾಗಿದೆ.

ಮೆರವಣಿಗೆಯಲ್ಲಿ ಪಂಚವಾದ್ಯ, ಡೋಲು, ಜಾಂಝ್ ಮೇಳಗಳು ಪಾಲ್ಗೊಂಡಿವೆ. ಜೊತೆಗೆ ಭಾರತ ಮಾತೆಯ ಆಳೆತ್ತರದ ಭಾವಚಿತ್ರ, ಭಗವಧ್ವಜ, ಕೇಸರಿ ಬಾವುಟಗಳು ರಾರಾಜಿಸಿವೆ. ಬಿಜೆಪಿ, ಆರ್‌ಎಸ್ಎಸ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ವಿಎಚ್.ಪಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದಾರೆ.
ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಡಿಸಿಪಿ ರಾಜೀವ್ ಎಂ. ನೇತೃತ್ವ ವಹಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ, ಸಿಎಆರ್ ತುಕಡಿಗಳು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.
ನಾಲ್ಕು ಸಂಘಟನೆಗಳಲ್ಲಿ ಒಂದಕ್ಕೆ ಮೂರು ದಿನ ಗಣೇಶೋತ್ಸವ ಆಚರಣೆ ಮಾಡಲು ಮಾತ್ರ ಅನುಮತಿ ನೀಡಲಾಗಿದ್ದು, ಉಳಿದ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿದೆ. ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಾಕಷ್ಟು ಬೆಳವಣಿಗೆ ಸಹ ನಡೆಯುತಿದ್ದು, ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಮಿತಿ ಕಾನೂನು ಹೋರಾಟಕ್ಕೆ ಸಹ ಪ್ಲಾನ್ ಮಾಡಿ ಹಿನ್ನಲೆಯಲ್ಲಿ ಈ ಸಲ ಅತ್ಯಂತ ಸೂಕ್ಷ್ಮವಾದ ವಾತಾವರಣ ಇದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮೈದಾನಕ್ಕೆ ಬಿಗಿ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಕಡೆಯಲ್ಲಿ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸೇರಿದಂತೆ ಕೆಎಸ್ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ವತಃ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಉಸ್ತುವಾರಿ ವಹಿಸಿದ್ದಾರೆ.












Click it and Unblock the Notifications