Ganesh chaturhti 2023: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕೂರುವ ಗಣಪ ಇದು
ಹುಬ್ಬಳ್ಳಿ, ಸೆಪ್ಟೆಂಬರ್, 18: ನಗರದ ವಿವಾದಾತ್ಮಕ ರಾಣಿ ಚೆನ್ನಮ್ಮ (ಈದ್ಗಾ) ಮೈದಾನಕ್ಕೆ ತಡರಾತ್ರಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಪೊಲೀಸ್ ಭದ್ರತೆ ನಡುವೆ ಗಣೇಶ ಮೂರ್ತಿಯನ್ನು ತರಲಾಗಿದೆ. ಇದೀಗ ಈ ಗಣೇಶ ಮೂರ್ತಿಯನ್ನು ನಗರದ ಮೂರು ಸಾವಿರ ಮಠದಲ್ಲಿ ಇಡಲಾಗಿದ್ದು, ನಾಳೆ ಬೆಳಗ್ಗೆ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗಣೇಶನನ್ನು ಅದ್ದೂರಿಯಾಗಿ ಸ್ವಾಗತಿಸಿದ ಹಿಂದೂ ಪರ ಸಂಘಟನೆಗಳ ಸಾವಿರಾರು ಮುಖಂಡರು, ನಗರದ ಮೂರು ಸಾವಿರ ಮಠದಲ್ಲಿ ಗಣೇಶ ಮೂರ್ತಿಯನ್ನು ಇರಿಸಿದ್ದಾರೆ. ಸಾಕಷ್ಟು ವಿವಾದದ ನಡುವೆ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕೊಡಲಾಗಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣಪತಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಈಗ ಧಾರವಾಡದ ಚರಂತಿಮಠ ಗಾರ್ಡನ್‌ನಲ್ಲಿನ ಕಲಾವಿದರಿಂದ ತಯಾರಾದ ಗಣಪನನ್ನು ಈದ್ಗಾ ಮೈದಾನಕ್ಕೆ ತರಾಲಾಗಿದೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕಲಾವಿದ ಸಂಜಯ ಪಾಲ್ ಅವರು ಕೊಲ್ಕತ್ತಾ ಮಣ್ಣಿನಲ್ಲಿ ಈ ಗಣೇಶ ಮೂರ್ತಿಯನ್ನು ಮಾಡಿದ್ದಾರೆ. ಇದನ್ನು ರಾಮಸೇತುವೆಯ ಕಲ್ಲುಗಳ ಮೇಲೆ ಹನುಮಂತ ಕುಳಿತ ರೂಪದಲ್ಲಿ ತಯಾರು ಮಾಡಲಾಗಿದೆ. ಮೂರುಸಾವಿರ ಮಠದಲ್ಲಿ ಇಟ್ಟಿರುವ ಈ ಗಣಪತಿ ಮೂರ್ತಿಯನ್ನು ಸೆಪ್ಟೆಂಬರ್ 19 ರಂದು ಬೆಳಗ್ಗೆ 9 ಗಂಟೆಗೆ ಮಠದಿಂದ ಈದ್ಗಾ ಮೈದಾನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲದ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಠದಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ ಎಂದು ಗಜಾನನ ಉತ್ಸವ ಸಮಿತಿ ಮುಖಂಡ ರಾಘವೇಂದ್ರ ಹೇಳಿದ್ದಾರೆ.












Click it and Unblock the Notifications