ನಾನು ಕಟ್ಟಿ ಬೆಳೆಸಿದ ಮನೆಯಿಂದಲೇ ನನ್ನನ್ನು ಹೊರ ಹಾಕಿದ್ದಾರೆ - ಜಗದೀಶ್ ಶೆಟ್ಟರ್ ಬೇಸರ
ಧಾರವಾಡ, ಏಪ್ರಿಲ್ 26: ನಾನು ಯಾವ ಮನೆ ಕಟ್ಟಿ ಬೆಳೆಸಿದ್ದೆನೋ ಅದೇ ಮನೆಯಿಂದ ಇಂದು ನನ್ನನ್ನು ಹೊರ ಹಾಕಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಧಾರವಾಡದ ಕಡಪಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು ಅವರು, ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಬಿಜೆಪಿ ಪಕ್ಷವನ್ನು ಕಟ್ಟಿದ್ದೆ. 6 ಬಾರಿ ಶಾಸಕನಾಗಿ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೆ. ಆದರೆ, 7ನೇ ಬಾರಿಗೆ ಸ್ಪರ್ಧೆ ಮಾಡಲು ನನಗೆ ಅವಕಾಶ ಕೊಡಲಿಲ್ಲ ಎಂದರು.

ಪಕ್ಷದವರು ಗೌರವಯುತವಾಗಿ ಸ್ಪರ್ಧೆ ಮಾಡಬೇಡಿ ಎಂದಿದ್ದರೆ ನಾನೇ ಸ್ಪರ್ಧೆ ಮಾಡುತ್ತಿರಲಿಲ್ಲ. ಆದರೆ, ಪಕ್ಷದವರು ನನ್ನನ್ನು ಅಗೌರವದಿಂದ ನಡೆಸಿಕೊಂಡರು. ಸಣ್ಣ ಹುಡುಗನಿಗೆ ಹೇಳುವ ಹಾಗೆ ನನಗೆ ಸ್ಪರ್ಧೆ ಮಾಡದಂತೆ ಹೇಳಿದರು. ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಿತು. ಪಕ್ಷ ಕಟ್ಟಿ ಬೆಳೆಸಿದವರೇ ಪಕ್ಷ ಬಿಡುವಂತಾಯಿತು ಎಂದು ಬೇಸರ ಹೊರಹಾಕಿದ್ದಾರೆ.
ಬಿಜೆಪಿ ಪಕ್ಷ ಈಗ ಕೆಲವೇ ಕೆಲವರ ಹಿಡಿತದಲ್ಲಿದೆ. ನಾನು ಕಾಂಗ್ರೆಸ್‌ಗೆ ಸೇರ್ಪಡೆಯಾದಾಗ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಗೌರವದಿಂದ ನನ್ನನ್ನು ನೋಡಿಕೊಳ್ಳಿ ಎಂದು ಮಾತ್ರ ಹೇಳಿದ್ದೆ. ಕಾಂಗ್ರೆಸ್ ಈಗ ಅದೇ ರೀತಿ ನಡೆದುಕೊಳ್ಳುತ್ತಿದೆ. ಚಾಲೆಂಜ್ ಮಾಡಿ ನಾನು ಬಿಜೆಪಿಯಿಂದ ಹೊರಗಡೆ ಬಂದಿದ್ದೇನೆ. ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ನಾನೇ ಗೆಲುವು ಸಾಧಿಸಲಿದ್ದೇನೆ. ನಾನು ಯಾವುದೇ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿಲ್ಲ. ಈ ಬಾರಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.
ಈ ಹಿಂದೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಅಮಿತ್ ಶಾ, ಬಿ.ಎಸ್ ಯಡಿಯೂರಪ್ಪ, ಜೆ.ಪಿ ನಡ್ಡಾ, ಸ್ಮೃತಿ ಇರಾನಿ ಹೀಗೆ ಬಿಜೆಪಿ ನಾಯಕರು ಎಲ್ಲರೂ ಸೇರಿ ನನ್ನ ಸೋಲಿಸಲು ಪಣ ತೊಟ್ಟಿದ್ದಾರೆ. ಬಿಜೆಪಿ ನನ್ನನ್ನು ಸೋಲಿಸುವ ಅಭಿಯಾನ ನಡೆಸುತ್ತಿದೆ. ಈ ಬಡಪಾಯಿ ಮೇಲೆ ಯಾಕೆ ಮುಗಿ ಬೀಳುತ್ತಿದ್ದಾರೆ ಗೊತ್ತಿಲ್ಲ..? ಎಂದು ಪ್ರಶ್ನಿಸಿದ್ದರು.

ಆಯನೂರ ಮಂಜುನಾಥ್, ಲಕ್ಷ್ಮಣ ಸವದಿ, ಎನ್.ಆರ್ ಸಂತೋಷ್ ಎಲ್ಲರೂ ಪಕ್ಷ ತೊರೆದಿದ್ದಾರೆ. ಆದರೆ ನಾನು ಪಕ್ಷ ತೊರೆದಿದ್ದನ್ನು ದೊಡ್ಡ ಅಪರಾಧ ಮಾಡಿದವನಂತೆ ನನ್ನ ವಿರುದ್ಧ ಮುಗಿಬಿದ್ದಿದ್ದಾರೆ.ಬಿ.ಎಸ್ ಯಡಿಯೂರಪ್ಪ ಕೆಜೆಪಿ ಕಟ್ಟುವಾಗ ಐಡಿಯಲಾಜಿ ಎಲ್ಲಿ ಹೋಗಿತ್ತು.? ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಯಡಿಯೂರಪ್ಪ ಅವರ ಬೈಗುಳ, ಟೀಕೆಯನ್ನು ಆಶೀರ್ವಾದ ಎಂದು ತೆಗೆದುಕೊಂಡಿದ್ದೇನೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ. ಯಡಿಯೂರಪ್ಪ ಅವರ ಬೈಗುಳ ನನ್ನ ಗೆಲುವಿಗೆ ಅನುಕೂಲವಾಗಲಿದೆ. ನನಗೆ ಬೈದಷ್ಟು ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು.












Click it and Unblock the Notifications