ಮುಡಾ, ವಾಲ್ಮೀಕಿ ಹಗರಣ: ಸಿಎಂ-ಡಿಸಿಎಂ ದೆಹಲಿಗೆ ಹೋಗಿ ಸ್ಪಷ್ಟನೆ ಕೊಟ್ಟಿದ್ದೇಕೆ?: ಶಾಸಕ
ಹುಬ್ಬಳ್ಳಿ, ಜುಲೈ 30: ವಾಲ್ಮೀಕಿ ನಿಗಮದ ಹಗರಣ ಹಾಗೂ ಮೈಸೂರು ನಗರಾಭಿವೃದ್ಧಿ ಇಲಾಖೆಯಲ್ಲಿನ ಹಗರಣದಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರವಲ್ಲದೇ ಕಾಂಗ್ರೆಸ್ ಹೈಕಮಾಂಡ್ ಸಹ ಭಾಗಿಯಾಗಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಗರಣದಲ್ಲಿ ನೇರ ಭಾಗಿಯಾಗಿದ್ದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಸ್ಪಷ್ಟನೆ ಕೊಡುವ ಅಗತ್ಯವಿರಲಿಲ್ಲ ಟೀಕಿಸಿದರು.

ಈ ಮುಡಾ ಹಗರಣದಲ್ಲಿ ಭಾಗಿಯಾದ ಸರ್ಕಾರದ ವಿರುದ್ಧ ಇದೇ ಆಗಷ್ಟ್ 03 ರಿಂದ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಹಾಗೂ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಮೈಸೂರುವರೆಗೆ ಪಾದಯಾತ್ರೆ ನಡೆಯಲಿದೆ.
ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ಕೊಡಲಾಯಿತು. ಅಂದು ಯಾವುದೇ ಒತ್ತಡ ಇರದೇ ತನಿಖೆ ಮಾಡಲಾಯಿತು. ಈಗ ಇಷ್ಟೊಂದು ಅನಗತ್ಯ ಚರ್ಚೆ ಮಾಡಬಾರದು. ಹಗರಣದಲ್ಲಿ ದೆಹಲಿ ಕಾಂಗ್ರೆಸ್ ನಾಯಕರ ಪಾಲು ಸಹ ಇದೆ. ಈ ಕುರಿತು ಹೈಕಮಾಂಡ್ ಸ್ಪಷ್ಟನೇ ಕೇಳುವ ಅಗತ್ಯ ಇರಲಿಲ್ಲ. ಪ್ರಕರಣ ಕುರಿತು ಅಧಿಕಾರಿಗಳು ಮತ್ತು ಸಚಿವರ ಮೇಲೆ ಹೊಣೆ ಹೊರಿಸಬಾರದು ಎಂದರು.
ಸುದ್ದಿಗೋಷ್ಠಿ ಮೂಲಕ ದಾರಿ ತಪ್ಪಿಸಲು ಯತ್ನ
ಮುಡಾ ಪ್ರಕರಣ ಕುರಿತು ಈಗಾಗಲೇ ಅಧಿವೇಶನ ಒಳಗಡೆ ಸಹ ಹೋರಾಟ ನಡೆಸಲಾಗಿದೆ. ಈಗ ರಾಜ್ಯದ ಜನರ ಮುಂದೆ ಈ ಹಗರಣ ಇಡಲಾಗುತ್ತದೆ. ಒಟ್ಟಾರೆ ಏಳು ದಿನಗಳ ಕಾಲ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಧಿವೇಶನ ವೇಳೆ ಮುಖ್ಯಮಂತ್ರಿ ಸೇರಿದಂತೆ ಐದು ಜನ ಸಚಿರು ಸುದ್ದಿಗೋಷ್ಠಿ ನಡೆಸಿದರು. ಏಕೆಂದರೆ ಹಗರಣ ತಮ್ಮ ಬುಡಕ್ಕೆ ಬರುತ್ತದೆ ಎಂದು ತಿಳಿದು ನಡೆಸಿದ ಸುದ್ದಿಗೋಷ್ಠಿ ಇದಾಗಿತ್ತು. ಏಕಾಏಕಿ ಸಚಿವರಿಂದ ದಾರಿ ತಪ್ಪಿಸಲು ಮುಂದಾದರು. ಇಲ್ಲಿ ನಿಮ್ಮ ತಪ್ಪಿಲ್ಲವೆಂದರೆ ಸದನಗಳಲ್ಲಿ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಲೇವಡಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಸದ್ಯ ಕುಂಬಳಕಾಯಿ ಕಳ್ಳನೆಂದರೆ ಹೆಗಲು ಮುಟ್ಟಿಕೊಂಡು ನೋಡುವ ಹಾಗಿದೆ ಎಂದು ಅವರು ಲೇವಡಿ ಮಾಡಿದರು.
ವಾಲ್ಮೀಕಿ ಹಗರಣ, ಮುಡಾ ಹಗರಣ ಕುರಿತು ಅಧಿವೇಶನದಲ್ಲಿ 69ರ ಅಡಿಯಲ್ಲಿ ಚರ್ಚೆಗಾಗಿ ಕೇಳಲಾಯಿತು. ಮೂರು ದಿನಗಳ ಕಾಲ ಮುಡಾ, ವಾಲ್ಮೀಕಿ ನಿಗಮದ ಹಗರಣ ಕುರಿತು ಚರ್ಚೆ ಆಯಿತು. ವಿರೋಧ ಪಕ್ಷದ ನಾಯಕರದ ಆರ್ ಅಶೋಕ್ ಅವರು ಎಳೆ ಎಳೆಯಾಗಿ ಪ್ರಕರಣದ ಮಾಹಿತಿ ಬಿಡಿಸಿಟ್ಟರು.
ಡೆತ್‌ನೋಟ್ ಸಿಗದಿದ್ದರೆ ರೂ.187 ಕೋಟಿ ಲೂಟಿ ಪಕ್ಕಾ
ಇದರಲ್ಲಿ ಯಾರ ಹಸ್ತಕ್ಷೇಪ ಇದೆ ಎಂದು ತಿಳಿಸಿದರು. ಇನ್ನೂ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ ಒಂದು ವೇಳೆ ಡೆತ್‌ನೋಟ್ ಬರೆದು ಇಡದೇ ಹೋಗಿದ್ದರೇ ರೂ. 187 ಕೋಟಿ ಲೂಟಿ ಆಗುತ್ತಿತ್ತು. ಲೂಟಿ ಆದ ಹಣದಲ್ಲಿ ಚುನಾವಣೆ ವೇಳೆ ಎಷ್ಟು ತೆಲಂಗಾಣ ರಾಜ್ಯಕ್ಕೆ ಹೋಯಿತು?, ಐಟಿ ತನಿಖೆ ಸಹ ಯಾವ ರೀತಿ ನಡೆದಿದೆ ಗೊತ್ತಾಗುತ್ತದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿಗಳು ನೇರವಾಗಿ ಭಾಗಿಯಾಗಿದ್ದಾರೆ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು. ಇನ್ನು ಮುಡಾ ಹಗರಣ ಕುರಿತು ನಿಲುವಳಿ ಸೂಚನೆಯನ್ನ ಆರ್ ಅಶೋಕ್ ಅವರು ತಂದರು. ಈ ನಿಲುವಳಿ ಮೇಲೆ ಚರ್ಚೆ ಮಾಡಲು ಸರ್ಕಾರ ಹಿಂದೇಟು ಹಾಕಿತು. ಸ್ಪೀಕರ್ ಮೇಲೆ ಒತ್ತಡ ತಂದು ಚರ್ಚೆ ಮಾಡಲಿಲ್ಲ. ಆದ್ದರಿಂದ ಈ ವಿಷಯವನ್ನು ಜನರ ಮುಂದೆ ಇಡುತ್ತಿದ್ದೇವೆ. ಸರ್ಕಾರದಿಂದ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಅವರು ಪುನರುಚ್ಚರಿಸಿದರು.












Click it and Unblock the Notifications