Breaking; ಹುಬ್ಬಳ್ಳಿ ಗಲಭೆ; ಮೌಲ್ವಿ ವಾಸಿಂ ಪಠಾಣ್ ಪೊಲೀಸ್ ವಶಕ್ಕೆ
ಹುಬ್ಬಳ್ಳಿ, ಏಪ್ರಿಲ್ 22; ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮೌಲ್ವಿ ವಾಸಿಂ ಪಠಾಣ್‌ನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಗುರುವಾರ ಪೊಲೀಸರು ಮೌಲ್ವಿ ಬಂಧಿಸಿದ್ದರು.
ಶುಕ್ರವಾರ ಹುಬ್ಬಳ್ಳಿಯ 4ನೇ ಜೆಎಂಎಫ್‌ಸಿ ನ್ಯಾಯಾಲಯ ಮೌಲ್ವಿ ವಾಸಿಂ ಪಠಾಣ್‌ನನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಮೌಲ್ವಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಕಳೆದ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಮೌಲ್ವಿಯೇ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೌಲ್ವಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಗುರುವಾರ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ ಮೌಲ್ವಿ ವಾಸಿಂ ಪಠಾಣ್, ರೌಡಿ ಶೀಟರ್ ತುಫೈಲ್ ಮುಲ್ಲಾ ಸೇರಿದಂತೆ 3 ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 134 ಆರೋಪಿಗಳನ್ನು ಬಂಧಿಸಲಾಗಿದೆ.
ಅಭಿಷೇಕ್ ಹಿರೇಮಠ ಎಡಿಟ್ ಮಾಡಿದ ಫೋಟೋವನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದು ಗಲಭೆಗೆ ಕಾರಣವಾಯಿತು. ಆರೋಪಿ ಬಂಧಿಸುವಂತೆ ಒಂದು ಕೋವಿನ ಜನರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡಿದ್ದರು. ಆಗ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು.
ಭಾರೀ ಸಂಖ್ಯೆಯ ಜನರು ಗುಂಪು ಸೇರಿದಾಗ ಗಲಭೆ ಆರಂಭವಾಗಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು. 12 ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಬಳಿಕ ಆಸ್ಪತ್ರೆ, ಆಂಜನೇಯ ದೇವಾಲಯಗಳ ಮೇಲೆ ಸಹ ಕಲ್ಲು ತೂರಾಟ ಮಾಡಲಾಯಿತು.
ಪೊಲೀಸ್ ಠಾಣೆ ಮುಂಭಾಗದಲ್ಲಿ ವಾಹನದ ಮೇಲೆ ಹತ್ತಿನಿಂತು ಮೌಲ್ವಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬುದು ಆರೋಪ. ಈ ಕುರಿತು ವಿಡಿಯೋ ವೈರಲ್ ಆಗಿತ್ತು.












Click it and Unblock the Notifications