ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರ ಶೇ.30 ಇಳಿಕೆ
ಹುಬ್ಬಳ್ಳಿ; ಉತ್ತರ ಕರ್ನಾಟಕದ ಹುಬ್ಬಳ್ಳಿಯಿಂದ ಸಚರಿಸುತ್ತಿದ್ದ ಮೂರು ವಿಶೇಷ ರೈಲುಗಳನ್ನು ಖಾಯಂಗೊಳಿಸಲಾಗಿದೆ. ಇನ್ನುಮುಂದೆ ಅವುಗಳ ನಿಯಮಿತ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದ್ದು, ವಿವಿಧ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಜೊತೆಗೆ ಟಿಕೆಟ್ ದರದ ಮೇಲಿನ ಶೇ. 30 ರಷ್ಟು ಹಣ ಉಳಿತಾಯವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಭಾಗದ ಜನರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸೋಮವಾರ ಹುಬ್ಬಳ್ಳಿ-ವಿಜಯಪುರ ಸೇರಿ 03 ರೈಲುಗಳನ್ನು ಖಾಯಂಗೊಳಿಸಿ ಅವುಗಳ ದೈನಂದಿನ ಸೇವೆಗೆ ಗ್ರೀನ್ ಸಿಗ್ನಲ್ ನೀಡಿ ಸಚಿವರು ಮಾತನಾಡಿದರು. ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದೆ. ನೈಋತ್ಯ ಪ್ರಮುಖ ವಿಶೇಷ ರೈಲುಗಳನ್ನು ಇಂದಿನಿಂದ 'ನಿಯಮಿತ ಸೇವೆ'ಗಳನ್ನಾಗಿ (Regular Train Services) ಪರಿವರ್ತಿಸಲಾಗಿದೆ. ಇದು ಉತ್ತರ ಕರ್ನಾಟಕದ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ಹೊಸ ವೇಗ ನೀಡಲಿದೆ ಎಂದು ಅವರು ತಿಳಿಸಿದರು.

ಟಿಕೆಟ್ ದರದಲ್ಲಿ ಶೇ. 30 ಇಳಿಕೆ
ರೈಲುಗಳ ನಿಯಮಿತ ಸೇವೆಯಿಂದಾಗಿ ಪ್ರಯಾಣಿಕರಿಗೆ ಆರ್ಥಿಕವಾಗಿಯೂ ದೊಡ್ಡ ಲಾಭವಾಗಲಿದೆ. ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಸೂಪರ್‌ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ. ಮೀಸಲು ದರ್ಜೆಯ ಟಿಕೆಟ್ ದರದಲ್ಲಿ ಸುಮಾರು 30% ರಷ್ಟು ಕಡಿತವಾಗಲಿದ್ದು, ಪ್ರಯಾಣವು ಅತ್ಯಂತ ಕೈಗೆಟಕುವ ದರದಲ್ಲಿ ಸಿಗಲಿದೆ.
ಖಾಯಂಗೊಂಡ ರೈಲುಗಳ ಮಾಹಿತಿ
* ಹುಬ್ಬಳ್ಳಿ - ವಿಜಯಪುರ ರೈಲುಗಳು (56919/56920 & 66501/66502) ಇನ್ನು ಮುಂದೆ ನಿಯಮಿತವಾಗಿ ಸಂಚರಿಸಲಿವೆ. ಇದರಿಂದ ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಿತ್ಯ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರವಾಸೋದ್ಯಮ, ಕೈಗಾರಿಕೆ, ಶೈಕ್ಷಣಿಕ ರಂಗಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ ಎಂದರು.
* ಹುಬ್ಬಳ್ಳಿ-ಹೃಷಿಕೇಶಕ್ಕೆ ನೇರ ರೈಲು (17363/64) ಮೊದಲು ಹುಬ್ಬಳ್ಳಿಯಿಂದ ವಾರಕ್ಕೊಮ್ಮೆ ಯೋಗ ನಗರಿ ಹೃಷಿಕೇಶಗೆ ಸಂಚರಿಸುತ್ತಿತ್ತು. ಅದನ್ನೀಗ ನಿಯಮಿತ ಸೇವೆಯಾಗಿ ಖಾಯಂಗೊಳಿಸಲಾಗಿದೆ. ಉತ್ತರ ಕರ್ನಾಟಕದಿಂದ ಉತ್ತರ ಭಾರತಕ್ಕೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ವರ್ಷಪೂರ್ತಿ ಸುಲಭ ಪ್ರಯಾಣ ಒದಗಿಸಲಿದೆ ಎಂದು ಸಚಿವರು ತಿಳಿಸಿದರು.
ನೂತನ ಮೆಮು ರೈಲಿಗೆ ಚಾಲನೆ
* ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿ - ವಿಜಯಪುರಕ್ಕೆ ನೂತನ ನಿಯಮಿತ ಮೆಮು ರೈಲು (MEMU 66501) ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಗಿದೆ. ಈ ಭಾಗದ ಜನರ ಬೇಡಿಕೆ ಈಡೇರಲು ರೈಲ್ವೆ ಇಲಾಖೆ ಸ್ಪಂದಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬುತ್ತಿದೆ. ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ ಎಂದು ಅವರು ಅಭಿನಂದಿಸಿದರು.













Click it and Unblock the Notifications