ಅತಿಥಿ ಮನೆಗೆ ಬಂದ ತಕ್ಷಣ ಮೊದಲು ಕುಡಿಯಲು ನೀರು ಕೊಡಬೇಕು: ಗ್ರಹ ದೋಷ ನಿವಾರಣೆಗೆ ಬಹಳ ಮುಖ್ಯ ಇದು
ಅತಿಥಿ ದೇವೋ ಭವ ಎಂಬ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ಬಹಳ ಪ್ರಾಮುಖ್ಯತೆ ಇದೆ. ಮನೆಗೆ ಅತಿಥಿ ಬಂದಾಗ ಅವರಿಗೆ ಮೊದಲು ಕುಡಿಯಲು ನೀರು ನೀಡುವುದು ಪದ್ದತಿ. ನಿಜವಾಗಿ ನೋಡಿದರೆ ಈ ಸಂಪ್ರದಾಯದ ಹಿಂದೆ ಜ್ಯೋತಿಷ್ಯ, ವಾಸ್ತುಶಿಲ್ಪ, ಸಾಮಾಜಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಈ ಪದ್ಧತಿಯನ್ನು ಅತಿಥಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ. ಈ ಪದ್ಧತಿ ಮನೆಯ ಸಕಾರಾತ್ಮಕ ಶಕ್ತಿಯನ್ನು ರಕ್ಷಿಸುತ್ತದೆ. ಜ್ಯೋತಿಷ್ಯದಲ್ಲಿ, ನೀರಿನ ಅಂಶವು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಮನೆಗೆ ಬಂದ ಅತಿಥಿಗೆ ನೀರು ಕೊಡುವುದರಿಂದ ಮನೆಯ ಸಕಾರಾತ್ಮಕ ಶಕ್ತಿ ಅತಿಥಿಗೆ ಪಸರಿಸುತ್ತದೆ. ಅತಿಥಿಗಳು ಮನೆಗೆ ಬಂದಾಗ ನೀವು ಕೊಡುವ ನೀರಿನ ಒಂದು ಗುಟುಕನ್ನಾದರೂ ಅತಿಥಿಗಳು ಕುಡಿಯಲೇ ಬೇಕು. ಇಲ್ಲವಾದರೆ ರಾಹು-ಕೇತುಗಳಂತಹ ಗ್ರಹಗಳ ಪ್ರಭಾವ ನಿಮ್ಮ ಮೇಲೆ ಹೆಚ್ಚಾಗಬಹುದು. ಈ ಮೂಲಕ ಅಶುಭ ಘಟನೆಗಳು ಸಂಭವಿಸಬಹುದು ಎನ್ನುತ್ತದೆ ಜ್ಯೋತಿಷ್ಯ.
ಜ್ಯೋತಿಷ್ಯದಲ್ಲಿ ನವಗ್ರಹಗಳನ್ನು ಬಲಪಡಿಸಲು ನೀರಿನ ಆಚರಣೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇದು ಅದೃಷ್ಟವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ, ದೀರ್ಘ ಪ್ರಯಾಣ ಮಾಡಿಕೊಂಡು ಬರುವ ಅತಿಥಿಗಳಿಗೆ ಬಾಯಾರಿಕೆಯಾಗುತ್ತಿತ್ತು. ಆಗ ಅವರಿಗೆ ಮೊದಲು ನೀರು ನೀಡುವ ಮೂಲಕ ಬಾಯಾರಿಕೆ ತಣಿಸಿ ಸ್ವಾಗತಿಸಲಾಗುತ್ತಿತ್ತು, ಸಮಾಧಾನಪಡಿಸಲಾಗುತ್ತಿತ್ತು. ಈ ಸಂಪ್ರದಾಯವು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಇನ್ನೂ ಮುಂದುವರೆದಿದೆ. ಅತಿಥಿ ಬಂದ ತಕ್ಷಣ ಅವರಿಗೆ ನೀರು ನೀಡುವ ಮೂಲಕ ಪ್ರೀತಿ ಕರುಣೆಯನ್ನು ವ್ಯಕ್ತಪಡಿಸುತ್ತಾರೆ. ಇದು ಸಂಬಂಧಗಳನ್ನು ಬಲಪಡಿಸುತ್ತದೆ ಎನ್ನುವುದನ್ನು ವಾಸ್ತು ಶಾಸ್ತ್ರ ದಲ್ಲಿಯೂ ಹೇಳಲಾಗಿದೆ.

ಬಂದಿರುವ ಅತಿಥಿಗಳಿಗೆ ನೀರು ಕೊಡುವಾಗ, "ನೀರು ಕುಡಿಯಿರಿ" ಎಂದು ಹೇಳಬೇಕು. ಹೊರತು "ನೀರು ಕುಡಿಯುತ್ತೀರಾ?" ಎಂದು ಕೇಳಬಾರದು. ಒಂದೊಮ್ಮೆ "ನೀರು ಕುಡಿಯುತ್ತೀರಾ?" ಎಂದು ಕೇಳಿದರೆ, ಅತಿಥಿ "ಇಲ್ಲ" ಎಂದು ಹೇಳಬಹುದು. ಆದರೆ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯು ಅತಿಥಿಯನ್ನು ತಲುಪಬೇಕಾದರೆ, ನೀರನ್ನು ಕುಡಿಯಬೇಕು. ಅದಕ್ಕಾಗಿಯೇ ಅತಿಥಿಗೆ ನೀರು ಕೊಡುವಾಗ ಅದನ್ನು ಕುಡಿಯಲು ಹೇಳಬೇಕು. ಅತಿಥಿ ಸ್ವಲ್ಪ ನೀರು ಕುಡಿದರೂ ಅದು ಶುಭ ಸಂಕೇತವಾಗಿರುತ್ತದೆ. ಒಂದು ವೇಳೆ ಅತಿಥಿಗಳು ಅದನ್ನು ಕುಡಿಯದಿದ್ದರೆ, ಅದು ಅಶುಭ ಸಂಕೇತವಾಗಿರುತ್ತದೆ. ಅತಿಥಿಗಳು ಕುಡಿದು ಬಿಟ್ಟ ನೀರನ್ನು ಬೇರೆ ಯಾರೂ ಕುಡಿಯಬಾರದು. ಬದಲಿಗೆ ಅದನ್ನು ಸಿಂಕ್‌ಗೆ ಅಥವಾ ಸಸ್ಯಗಳಿಗೆ ಹಾಕಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.
ವಾಸ್ತು ಶಾಸ್ತ್ರದ ಪ್ರಕಾರ, ಈ ಆಚರಣೆಯು ನವಗ್ರಹಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಅತಿಥಿ ನೀರು ಕುಡಿಯದೆ ಹೋದರೆ, ಗ್ರಹಗಳ ಸ್ಥಾನ ದುರ್ಬಲಗೊಳ್ಳಬಹುದು ಮತ್ತು ರಾಹುವಿನ ಪ್ರಭಾವ ಹೆಚ್ಚಾಗಬಹುದು. ಇದು ಮನೆಯ ವಾಸ್ತು ದೋಷಗಳ ಮೇಲೂ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ, ಗ್ರಹಶಾಂತಿಗಾಗಿ ನೀರನ್ನು ಬಳಸಲಾಗುತ್ತದೆ. ಸೂರ್ಯಾರ್ಘ್ಯದಂತಹ ಆಚರಣೆಗಳು ಇದಕ್ಕೆ ಉದಾಹರಣೆಯಾಗಿದೆ.
ವೈಜ್ಞಾನಿಕ ದೃಷ್ಟಿಕೋನದಿಂದ, ಹೊರಗಿನಿಂದ ಬಂದ ವ್ಯಕ್ತಿಗೆ ಬಾಯಾರಿಕೆಯಾಗಿರಬಹುದು. ಆಗ ನೀರು ಕುಡಿಯುವುದರಿಂದ ದೇಹದ ಉಷ್ಣತೆ ಸಮತೋಲನಗೊಳ್ಳುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಸಂಭಾಷಣೆಗಳು ಹೆಚ್ಚು ಸರಾಗವಾಗಿ ನಡೆಯುತ್ತವೆ. ಇದು ಆರೋಗ್ಯಕ್ಕೆ ಒಳ್ಳೆಯದು. ಇದು ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ. ಆಧುನಿಕ ಜೀವನದಲ್ಲಿ ಈ ಸಂಪ್ರದಾಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆಧುನಿಕ ಕಾಲದಲ್ಲಿ ಕಾಫಿ ಅಥವಾ ಚಹಾ ಕೇಳುವುದು ಸಾಮಾನ್ಯವಾದರೂ, ಮೊದಲು ನೀರು ನೀಡುವುದು ಒಳ್ಳೆಯದು. ಈ ಸಂಪ್ರದಾಯವು ಅತಿಥಿ ಕೇವಲ ಅತಿಥಿಯಲ್ಲ, ಆದರೆ ಭಾವನಾತ್ಮಕ ಸಂಬಂಧದ ಒಂದು ಭಾಗ ಎನ್ನುವುದನ್ನು ಕಲಿಸುತ್ತದೆ. ಜ್ಯೋತಿಷಿಗಳು ಕೂಡಾ ಮನೆಯಲ್ಲಿ ಈ ಆಚರಣೆಯನ್ನು ಮುಂದುವರಿಸಲು ಸೂಚಿಸುತ್ತಾರೆ.
ನವಗ್ರಹಗಳ ಶಾಂತಿಗಾಗಿ ನೀರಿನ ಆಚರಣೆಗಳನ್ನು ವೈದಿಕ ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಗ್ರಹಗಳ ಪ್ರಭಾವವನ್ನು ಸಮತೋಲನಗೊಳಿಸಲು ನೀರನ್ನು ಬಳಸಬಹುದು. ಅತಿಥಿಗಳನ್ನು ಸ್ವಾಗತಿಸುವಲ್ಲಿ ಈ ತತ್ವವನ್ನು ಅನ್ವಯಿಸಲಾಗುತ್ತದೆ. ಇದು ಕೇವಲ ಧಾರ್ಮಿಕ ನಂಬಿಕೆಯಲ್ಲ, ಸಾಂಸ್ಕೃತಿಕ ಪರಂಪರೆಯಾಗಿದೆ.
ಈ ಸಂಪ್ರದಾಯವು ಸಮಾಜದಲ್ಲಿ ಗೌರವ, ವಾತ್ಸಲ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಜ್ಯೋತಿಷ್ಯ, ವಾಸ್ತು ಮತ್ತು ವಿಜ್ಞಾನವನ್ನು ಸಂಯೋಜಿಸುವ ಈ ಪದ್ಧತಿಯು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ತೋರಿಸುತ್ತದೆ. ಅತಿಥಿಯೇ ದೇವರು, ಆದ್ದರಿಂದ ನಾವು ಮೊದಲು ಅವರಿಗೆ ನೀರು ನೀಡಬೇಕು. ಈ ಮೂಲಕ ನಮ್ಮ ಅದೃಷ್ಟವನ್ನು ಹೆಚ್ಚಿಸಬಹುದು. ಈ ಸಂಪ್ರದಾಯವನ್ನು ಪ್ರತಿ ಮನೆಯಲ್ಲೂ ಆಚರಿಸಬೇಕು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications