'ಸಚಿವರೊಬ್ಬರು ಮುಡಾ ಹಗರಣ ದಾಖಲೆಗಳನ್ನು ಹೆಲಿಕಾಪ್ಟರ್‌ನಲ್ಲಿ ತುಂಬಿಕೊಂಡು ಹೋದರು'
ಹುಬ್ಬಳ್ಳಿ, ಆಗಸ್ಟ್ 21: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಡಾ ಹಗರಣ ಆರೋಪ ಹೊರಗಡೆ ಬರುತ್ತಿದ್ದಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮೈಸೂರಿಗೆ ಆಗಮಿಸಿ ಹಗರಣ ಎಲ್ಲಾ ದಾಖಲೆಗಳನ್ನು ಕಸದಂತೆ ಹೆಲಿಕಾಪ್ಟರ್‌ನಲ್ಲಿ ತುಂಬಿಕೊಂಡು ಹೋದರು. ಇದೀಗ ಅಕ್ರಮ ಎನ್ನಲಾದ ದಾಖಲೆಗಳಲ್ಲಿ ವೈಟ್ನರ್ ಹಚ್ಚಲಾಗಿದೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಭ್ರಷ್ಟಾಚಾರದ ಕೈವಾಡಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಮಾಧ್ಯಮಗಳೇ ಬೆತ್ತಲು ಮಾಡುತ್ತಿವೆ. ನಾವು ಇಂತಹ ಜಾಗದಲ್ಲೇ ನಿವೇಶನ ಕೊಡಿ ಎಂದು ಅರ್ಜಿ ಹಾಕಿರಲಿಲ್ಲ ಎಂದು ಸುಳ್ಳು ಸಮರ್ಥನೆ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರೇ ಈಗೇನು ಹೇಳುತ್ತೀರಿ..? ಎಂದು ಪ್ರಶ್ನೆ ಮಾಡಿದರು.

ಇಂತಹದ್ದೇ ಜಾಗದಲ್ಲಿ ಸೈಟು ಕೊಡುವಂತೆ ನಿಮ್ಮ ಧರ್ಮಪತ್ನಿ ಪಾರ್ವತಿ ಅವರೇ ಮುಡಾ ಪ್ರಾಧಿಕಾರಕ್ಕೆ ಬರೆದಿರುವ ಪತ್ರವೇ ಪ್ರತ್ಯಕ್ಷ್ಯ ಸಾಕ್ಷಿಯಾಗಿ ನಿಂತಿದೆ. ಆ ಪತ್ರದಲ್ಲಿ ಯಾವ ಸ್ಥಳದಲ್ಲಿ ಎಂದು ಬರೆದಿರುವ ಜಾಗಕ್ಕೆ ವೈಟ್ನರ್ ಹಾಕಿದವರು ಯಾರು..? ಇದು ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ನೀವು ನಿವೇಶನ ಕಬಳಿಸಲು ಹಾಗೂ ನಿಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮಾಡಿರುವ ಷಡ್ಯಂತ್ರ ಅಲ್ಲವೇ ಸಿದ್ದರಾಮಯ್ಯನವರೇ..?
ಮುಖ್ಯಮಂತ್ರಿಯಾಗಿ ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ, ಕಾನೂನಿನ ದುರುಪಯೋಗ ಮಾಡಿಕೊಂಡಿದ್ದೀರಿ. ಸತ್ಯಹರಿಶ್ಚಂದ್ರ ಎಂದು ಬೆನ್ನುತಟ್ಟಿಕೊಳ್ಳುವ ನೀವು ಹಾಗೂ ನಿಮ್ಮ ಕರ್ನಾಟಕ ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಆ ಪತ್ರದ ಬಗ್ಗೆ ಉತ್ತರಿಸಿ. ಮುಡಾದಲ್ಲಿ ಭ್ರಷ್ಟಾಚಾರ ಎಸಗಿರುವ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆ ಹುದ್ದೆಯ ಘನತೆಯನ್ನು ಕಾಪಾಡಿ ಎಂದು ಆಗ್ರಹಿಸಿದರು.

ಸಿಎಂ ಅವರ ದಿವಂಗತ ಪುತ್ರನ ಕೈವಾಡವಿರುವುದು ಪತ್ತೆಯಾಗಿದೆ
ಮುಡಾ ಸೈಟ್ ಹಂಚಿಕೆಯಲ್ಲಿ ಸಿಎಂ ಪತ್ನಿ ಅವರಿಗೆ 14 ಸೈಟ್ ಪರ್ಯಾಯವಾಗಿ ನೀಡಿದರ ಬಗ್ಗೆ ನಮ್ಮ ಹೋರಾಟವಲ್ಲ. ಇದರ ಹೆಸರಿನಲ್ಲಿ 3500 ಸೈಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದು, ಇದರಲ್ಲಿ ಸಿಎಂ ಭಾಗಿಯಾಗಿದ್ದಾರೆ ಹಾಗಾಗಿ ತನಿಖೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಹೋರಾಟ ಮಾಡುತ್ತಿದೆ. ಈ ಎಲ್ಲ ಪ್ರಕರಣಗಳು ಸಿಎಂ ಅವರ ದಿವಂಗತ ಪುತ್ರನ ಕೈವಾಡವಿರುವುದು ಪತ್ತೆಯಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ದೂರದರು.
ಸಾಂವಿಧಾನಿಕ ಪ್ರಮುಖರಾಗಿರುವ ರಾಜ್ಯಪಾಲರು ಕೂಡಾ ದಲಿತ ಸಮುದಾಯಕ್ಕೆ ಸೇರಿದವರು. ಅವರನ್ನು ಹಿಗ್ಗಾಮುಗ್ಗ ನಿಂದಿಸುವುದು. ಬೀದಿಗಳಲ್ಲಿ ಭಾವಚಿತ್ರ ಸುಡುವ ಮೂಲಕ ಅವರನ್ನು ತೇಜೋವಧೆ ಮಾಡಲಾಗಿದೆ. ಹಾಗಾಗಿ 7 ಜನ ಕಾಂಗ್ರೆಸ್ ಸಚಿವರ ವಿರುದ್ಧ ದೂರು ನೀಡಿದ್ದು, ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ. ತತ್‌ಕ್ಷಣ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.












Click it and Unblock the Notifications