Hubballi Siddharoodha Math: ಅವ್ಯವಹಾರಗಳ ಬಗ್ಗೆ ಕಮೀಟಿ ಅಧ್ಯಕ್ಷರು ಹೇಳಿದ್ದೇನು?: ಮಾರ್ಚ್ 7ಕ್ಕೆ ಸಭೆ
ಹುಬ್ಬಳ್ಳಿ, ಮಾರ್ಚ್ 05: 'ಶ್ರೀ ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ...ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ...' ಎಂಬ ಮಾತು ನಾಡಿನಲ್ಲಿ ಜನಜನಿತವಾಗಿದೆ. ಇಂತಹ ಸಿದ್ಧಾರೂಢರ ಮಠದಲ್ಲಿ ಹಣದ ವ್ಯವಹಾರ, ಖರ್ಚು ವೆಚ್ಚ ಕುರಿತು ಭಕ್ತರು ಮತ್ತು ಟ್ರಸ್ಟಿಗಳ ಮಧ್ಯೆ ಗಲಾಟೆ ನಡೆದಿದೆ. ಈ ಕುರಿತು ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್ ಸ್ಪಷ್ಟನೆ ಕೊಟ್ಟಿದ್ದಾರೆ.
ನಮ್ಮ ಮಠದ ಹಣ ದುರ್ಬಳಕೆಯಾಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ ಎಂಬ ಆರೋಪ ಮೇರೆಗೆ ಮಂಗಳವಾರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ದೇವರು ಶ್ರೀ ಸಿದ್ಧಾರೂಢರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಮಠದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ. ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಾಡಿದ್ದು ಮಾರ್ಚ್ 7ರಂದು ಸರ್ವಭಕ್ತರ ಸಭೆ ಕರೆಯುತ್ತೇವೆ ಎಂದು ಅವರು ತಿಳಿಸಿದರು.

ನಾವು ಭಕ್ತರ ಸಲಹೆ ಮತ್ತು ಪ್ರಶ್ನೆಗಳನ್ನು ಸ್ವೀಕರಿಸುತ್ತೇವೆ. ಎಲ್ಲದಕ್ಕೂ ಲಿಖಿತ ಉತ್ತರವನ್ನು ಕೊಡುತ್ತೇವೆ. ಪ್ರತಿಯೊಂದು ಖರ್ಚು ವೆಚ್ಚದ ಲೆಕ್ಕ ಪತ್ರಗಳು ನಮ್ಮ ಬಳಿ ಇವೆ.
ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ
ಇನ್ನು ಶ್ರೀ ಸಿದ್ಧಾರೂಢಮಠದ ಘನತೆಗೆ ಕುಂದು ತರುವಂತಹ ಯತ್ನದಲ್ಲಿ ಭಾಗಿಯಾದ ಗುರುಶಾಂತಪ್ಪ ಕಾರಿ ಮತ್ತು ಗುರುಸಿದ್ದಪ್ಪ ಅಂಗಡಿ ಇವರುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಟ್ರಸ್ಟ ಕಮೀಟಿಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ದಿ. 3ರಂದು ದಾಸೋಹ ಹಾಲಿನಲ್ಲಿ ನಡೆದ ಶಿವರಾತ್ರಿ ಮಹೋತ್ಸವದಂಗವಾಗಿ ಕರೆದ ಪೋಷಕರು, ಆಶ್ರಯದಾತರು, ಅಜೀವ ಸದಸ್ಯರ ಸಭೆಯಲ್ಲಿ ಮಠದವರು ಅಡಿಟ್ ರಿಪೋರ್ಟ ನೀಡಿರುವುದಿಲ್ಲ ಅಲ್ಲದೇ ಜಮಾ ಖರ್ಚನ್ನು ನೀಡಿರುವುದಿಲ್ಲ ಎಂದು ಮಾಧ್ಯಮದವರ ಮುಂದೆ ಸುಳ್ಳು ಹೇಳಿಕೆ ನೀಡಲಾಗಿದೆ. ಈ ಮೂಲಕ ಮಠದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೇ ಭಕ್ತಾಧಿಗಳನ್ನು ತಪ್ಪು ದಾರಿಗೆಳೆಯುವ ಯತ್ನ ಮಾಡಿದ್ದಾರೆ ಎಂದು ಅವರು ದೂರಿದರು.

ವೇದಿಕೆಯಿಂದ ಮಠದ ಟ್ರಸ್ಟ್‌ಗೆ ಬ್ಲಾಕ್ ಮೇಲ್
ಶ್ರೀ ಮಠದ ಆರೂಢ ತತ್ವ ಪ್ರಚಾರ ವೇದಿಕೆ ಎಂಬ ಸುಳ್ಳು ಸಂಸ್ಥೆ ಹುಟ್ಟು ಹಾಕಿದ ಗುರುಶಾಂತಪ್ಪ ಕಾರಿ ಹಾಗೂ ಅಂಗಡಿಯವರ ತಂಡ ಮಾರ್ಚ್ 3ರಂದು ಶ್ರೀಮತಿ ಲೀಲಾವತಿ ಪಾಸ್ತೆ ಅವರು ಅಭಿಪ್ರಾಯ ಮಂಡಿಸಲು ಬಂದ ಸಂದರ್ಭದಲ್ಲಿ ಮೈಕ್ ಕಸಿದು ದಾಂಧಲೆ ನಡೆಸಿದ್ದಾರೆ. ಜತೆಗೆ ವೇದಿಕೆ ಸದಸ್ಯರು ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಿವರಿಸಿದರು.
ಸಭೆಯಲ್ಲಿದ್ದ ಎಲ್ಲರಿಗೂ ಅಢಾವೆ ಪತ್ರಿಕೆಯನ್ನು ನೀಡಲಾಗಿತ್ತಲ್ಲದೇ ಅದನ್ನು ಅಲ್ಲಗಳೆದು ಅಡ್ಡಿಪಡಿಸಿ ಸಭೆಯಲ್ಲಿ ಆತಂಕದ ವಾತಾವರಣ ಹುಟ್ಟು ಹಾಕಲಾಗಿದೆ. ಈ ರೀತಿ ಮಾಡುವ ಮುಖೇನ ವೇದಿಕೆ ಸದಸ್ಯರುಗಳು ಪದೇ ಪದೇ ಟ್ರಸ್ಟ್‌ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮಠದ ಕೆಲ ವಿಚಾರ ವಿವರಿಸಿದ ಟ್ರಸ್ಟ್ ಅಧ್ಯಕ್ಷರು
ಗುರುಸಿದ್ದಪ್ಪ ಅಂಗಡಿ ಇವರು ಮಠದ ಮುಂಭಾಗದಲ್ಲಿ ಫಲಪುಷ್ಪ ಮಳಿಗೆಯನ್ನು ತಂದೆಯ ಹೆಸರಲ್ಲಿ ಬಾಡಿಗೆ ಪಡೆದು ಅವರ ಅವಧಿ ಮುಗಿದಿದ್ದರೂ ರಿನಿವಲ್ ಮಾಡಿಲ್ಲವಾಗಿದ್ದ ಅಲ್ಲದೇ ಬಾಡಿಗೆಯನ್ನು ಉಳಿಸಿಕೊಂಡಿದ್ದರು. ಕೊನೆಗೂ ಸಮಿತಿಯವರು ಒತ್ತಡಕ್ಕೆ ಮಣಿದು ಕೆಲವು ದಿನದ ಹಿಂದೆ ಬಾಡಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.
ಅಂಗಡಿ ಮತ್ತು ಕಾರಿ ಸೇರಿದಂತೆ ಕೆಲವರು ಕೂಡಿ ಮಠದ ಬೈಲಾ ಸರಿಯಿಲ್ಲ 4-5 ಬಾರಿ ಅರ್ಜಿ ಹಾಕಿದರೂ ನೇಮಕವಾಗಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇಲ್ಮನೆಯ ಅಧ್ಯಕ್ಷರಾಗಿ ಡಿ.ಆರ್.ಪಾಟೀಲ, ಉಪಾಧ್ಯಕ್ಷರಾಗಿ ಬಾಗೇವಾಡಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಸಹ ಅಸಮಾಧಾನ ವ್ಯಕವಾಗಿದೆ.
ಇಂತಹ ವರ್ತನೆಗಳ ಮೂಲಕ ಮಠದ ಟ್ರಸ್ಟ್ ಕಮೀಟಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಶ್ರೀ ಮಠದಲ್ಲಿ ಪ್ರತಿ ತಿಂಗಳ ಆಡಿಟ್ ಮಾಡಿಸಿ ಪ್ರತಿಯನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಮಂಡಿಸಿ ಮುಖ್ಯ ಆಡಳಿತಾಧಿಕಾರಿಗಳಿಗೆ ನೀಡಲಾಗುವುದು ಎಂದರು. ಈ ವೇಳೆ ಟ್ರಸ್ಟ್ ಕಾರ್ಯದರ್ಶಿ ಸರ್ವಮಂಗಳಾ ಪಾಠಕ್, ಟ್ರಸ್ಟಿಗಳಾದ ಬಾಳು ಮಗಜಿಕೊಂಡಿ, ಶ್ಯಾಮಾನಂದ ಪೂಜಾರಿ, ಗೀತಾ ಕಲಬುರ್ಗಿ, ಚನ್ನವೀರ ಮುಂಗರವಾಡಿ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications