ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿ ಭರ್ಜರಿ ಬಿರಿಯಾನಿ ಬಾಡೂಟ: ಸಾರ್ವಜನಿಕರ ಆಕ್ಷೇಪ
ಹುಬ್ಬಳ್ಳಿ, ನವೆಂಬರ್ 29 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿ ಇರುತ್ತದೆ. ಈಗ ಪಾಲಿಕೆಯ ಆವರಣದಲ್ಲಿಯೇ ಬಿರಿಯಾನಿ ಮಾಡಿ ಭರ್ಜರಿ ಬಾಡೂಟ ಭೋಜನ ಸವಿದಿರುವ ಘಟನೆ ನಡೆದಿದ್ದು, ಈ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಮಹಾನಗರ ಪಾಲಿಕೆಯ ಆವರಣದಲ್ಲಿಯೇ ದೊಡ್ಡ ದೊಡ್ಡ ಪಾತ್ರೆಗಳನ್ನು ಇಟ್ಟು ಅಲ್ಲಿಯೇ ಒಲೆಯನ್ನು ಹೊತ್ತಿಸಿ ಬಿಸಿ ಬಿಸಿ ಬಿರಿಯಾನಿ ಮಾಡಿ ಹತ್ತಾರು ಜನರಿಗೆ ಬಡಿಸಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ವಿಪಕ್ಷ ನಾಯಕ ದೊರೆರಾಜ ಮಣಿಕುಂಟ್ಲ ಅವರ ನವೀಕೃತ ಕಚೇರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು.

ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮೇಯರ್ ಈರೇಶ ಅಂಚಟಗೇರಿ, ಸ್ವರ್ಣ ಸಮೂಹದ ಮುಖ್ಯಸ್ಥ ಡಾ.ಚಿಗರುಪಾಟಿ ವಿಎಸ್‌ವಿ ಪ್ರಸಾದ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರಸಮಲ್ ಜೈನ್, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಸದಸ್ಯರಾದ ನಿರಂಜನ ಹಿರೇಮಠ, ಮಾಜಿ ಸದಸ್ಯ ಮೋಹನ ಹಿರೇಮನಿ ಮುಂತಾದವರು ಕಚೇರಿಗೆ ತೆರಳಿ ಶುಭಾಶಯ ಕೋರಿದರು.
ವಿರೋಧ ಪಕ್ಷದ ನಾಯಕರ ಕಚೇರಿ ಉದ್ಘಾಟನೆ ಹಿನ್ನೆಲೆಯಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಕಚೇರಿ ಉದ್ಘಾಟನೆ ಹಿನ್ನೆಲೆಯಲ್ಲಿ ಪಾಲಿಕೆ ಅಂಗಳದಲ್ಲಿ ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಬಿಸಿ ಬಿಸಿ ಬಿರಿಯಾನಿ ಹಾಗೂ ಕಬಾಬ್ ಊಟವನ್ನು ಸಿದ್ಧಪಡಿಸಲಾಗಿತ್ತು. ಎರಡೂವರೆ ಕ್ವಿಂಟಾಲ್ ಮಟನ್ ಬಿರಿಯಾನಿ, 50 ಕೆ.ಜಿ ಚಿಕನ್ ಕಬಾಬ್ ತಯಾರಿಸಲಾಗಿದ್ದು, ನವೀಕೃತ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡ ನೂರಾರು ಜನರು ಬಿರಿಯಾನಿ ಊಟ ಸವಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಬಾಡೂಟಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದೆ. ಮಹಾನಗರ ಪಾಲಿಕೆ ನಮ್ಮ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು. ಅವಳಿ ನಗರದ ಅಭಿವೃದ್ಧಿ ಹಾಗೂ ಸೌಂದರ್ಯ ಕಾಪಾಡಬೇಕು. ಹಲವು ಉತ್ತಮ ಕಾರ್ಯಕ್ರಮದ ಮೂಲಕ ಅವಳಿ ನಗರದ ಅಭಿವೃದ್ಧಿ ಮಾಡಬೇಕು. ಆದರೆ ಇಲ್ಲಿ ಸದ್ಯ ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎನ್ನುವಂತಿದೆ ಎಂದು ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications